ಖಶೋಗ್ಗಿ ಕೊಲೆ; ಯುವರಾಜನ ಕೈವಾಡ?

Murderer murder; Have a prince?

17-11-2018

ಸೌದಿ ಅರೇಬಿಯದ ಯುವರಾಜನೇ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಮಾಡಿಸಿದ್ದು ಅನ್ನುವುದು ಅಮೆರಿಕದ ಗೂಢಚರ್ಯ ಸಂಸ್ಥೆ ಸಿಐಎ ನಿಲುವು. ಸೌದಿಯ ಯುವರಾಜ ಮೊಹಮದ್ ಬಿನ್ ಸಲ್ಮಾನ್ ಅಣತಿಯಿಲ್ಲದೆ ಇಂಥ ಒಂದು ಹತ್ಯೆ ನಡೆಯಲು ಸಾಧ್ಯವಿಲ್ಲ ಎಂದಿರುವ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(C.I.A) ಆ ಬಗ್ಗೆ ಸಾಕಷ್ಟು ಸುಳಿವುಗಳನ್ನೂ ಕಲೆಹಾಕಿದೆ. 

ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಗೆ ಮೊದಲು ಮತ್ತು ನಂತರ ಸೌದಿ ಯುವರಾಜ ಹಾಗೂ ಆತನ ಆಪ್ತರ ಫೋನ್ ಕರೆಗಳು ಇದಕ್ಕೆ ಆಧಾರವಾಗಿವೆ ಎಂದು ಸಿಐಎ ಹೇಳಿದೆ. ಈ ಮಾಹಿತಿಯನ್ನು ಅಮೆರಿಕ ಸರ್ಕಾರಕ್ಕೆ ರವಾನಿಸಿರುವ ಸಿಐಎ, ಖಶೋಗ್ಗಿ ಕೊಲೆ ನಂತರ ‘Kill Team’ ಸದಸ್ಯನೊಬ್ಬ, ಸೌದಿ ಯುವರಾಜನ ಆಪ್ತರಿಗೆ ಕರೆ ಮಾಡಿ ‘ಕೆಲಸ ಆಯಿತು ಎಂದು ನಿಮ್ಮ ಬಾಸ್ಗೆ ತಿಳಿಸಿ’ ಎಂದು ಹೇಳಿದ್ದ ಎಂಬ ಮಾಹಿತಿ ನೀಡಿದೆ.

ಆದರೆ, ಈ ಎಲ್ಲ ಮಾಹಿತಿಗಳು ಖಶೋಗ್ಗಿ ಕೊಲೆಗೆ ಸೌದಿಯ ಯುವರಾಜನೇ ನೇರವಾಗಿ ಕಾರಣ ಅನ್ನುವುದಕ್ಕೆ ಅಧಿಕೃತ ಪುರಾವೆಯೇನೂ ಅಲ್ಲ ಎಂದು ಸಿಐಎ ತಿಳಿಸಿದೆ. ಪತ್ರಕರ್ತ ಜಮಾಲ್ ಖಶೋಗ್ಗಿ ತಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆ ಪಡೆಯುವ ಸಲುವಾಗಿ ಇದೇ ಅಕ್ಟೋಬರ್ 2 ರಂದು, ಟರ್ಕಿ ದೇಶದ ರಾಜಧಾನಿ ಇಸ್ತಾನ್ಬುಲ್ ನಲ್ಲಿರುವ ಸೌದಿ ಅರೇಬಿಯದ ರಾಯಭಾರ ಕಚೇರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಜಮಾಲ್ ಖಶೋಗ್ಗಿಯನ್ನು ಹತ್ಯೆಮಾಡಿ, ಶವ ನಾಶಮಾಡಲಾಗಿತ್ತು. 

ಸೌದಿ ಅರೇಬಿಯದ ಪತ್ರಕರ್ತ 59 ವರ್ಷ ವಯಸ್ಸಿನ ಜಮಾಲ್ ಖಶೋಗ್ಗಿ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಾಗಿ ಬರೆಯುತ್ತಿದ್ದರು. ಅದಕ್ಕಿಂತ ಮೊದಲು, ಅಲ್-ಅರಬ್ ನ್ಯೂಸ್ ಚಾನಲ್ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದ ಖಶೋಗ್ಗಿ, ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯ ಸರ್ಕಾರದ ಟೀಕಾಕಾರರಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ