ತೃಪ್ತಿ ದೇಸಾಯಿಗೆ ಅತೃಪ್ತಿ?

Despair unhappy with satisfaction

16-11-2018

ಸುಪ್ರೀಂಕೋರ್ಟ್ ಆದೇಶದ ನೆರವಿನಿಂದ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಬೇಕು ಎಂಬ ತೃಪ್ತಿ ದೇಸಾಯಿ ಹಂಬಲ ಸದ್ಯಕ್ಕಂತೂ ಈಡೇರುವಂತೆ ಕಾಣುತ್ತಿಲ್ಲ.  ಶುಕ್ರವಾರ ಬೆಳಗಿನಜಾವ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತೃಪ್ತಿಗೆ ಅಲ್ಲಿಂದ ಹೊರಬರುವುದಕ್ಕೇ ಸಾಧ್ಯವಾಗಿಲ್ಲ. 

ಮಹಿಳೆಯರೂ ಸೇರಿದಂತೆ ಅಯ್ಯಪ್ಪನ ಭಕ್ತರ ಜೊತೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು, ಕೊಚ್ಚಿ ಏರ್ಪೋರ್ಟ್ ಸುತ್ತುವರಿದಿದ್ದು ಮಹಿಳಾಪರ ಹೋರಾಟಗಾರ್ತಿ ಮತ್ತು ಭೂಮಾತಾ ರಣರಾಗಿಣಿ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿಗೆ ದಿಗ್ಭಂಧನ ವಿಧಿಸಿದ್ದಾರೆ.

ಈ ಬೆಳವಣಿಗೆಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದ್ದು, ಹೇಗಾದರೂ ಮಾಡಿ ಪರಿಸ್ಥಿತಿ ತಿಳಿಗೊಳಿಸಿ ಎಂದು ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. 

ಆದರೆ, ‘ನಾನು ಅಯ್ಯಪ್ಪ ಸ್ವಾಮಿಯ ದರ್ಶನವಿಲ್ಲದೆ ವಾಪಸ್ ಹೋಗುವುದಿಲ್ಲ’ ಎಂದು ಹಟ ಹಿಡಿದಿರುವ ತೃಪ್ತಿ, ‘ಶಬರಿ ಮಲೆಗೆ ಪ್ರಯಾಣಿಸದಂತೆ ನನ್ನನ್ನು ತಡೆಹಿಡಿದಿರುವವರು ಗೂಂಡಾಗಳೇ ಹೊರತು, ಭಕ್ತರಲ್ಲ’ ಎಂದು ಕಿಡಿಕಾರಿದ್ದಾರೆ. ‘ನನ್ನನ್ನು ಶಬರಿ ಮಲೆಗೆ ಕರೆದೊಯ್ಯಲು ಟ್ಯಾಕ್ಸಿ ವ್ಯವಸ್ಥೆ ಮಾಡಿ’ ಎಂದು ತೃಪ್ತಿ ದೇಸಾಯಿ ಪೊಲೀಸರಿಗೆ ಆಗ್ರಹಿಸಿದ್ದರೂ ಕೂಡ, ಆಕೆಯನ್ನು ಶಬರಿಮಲೆಗೆ ತಲುಪಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. 

ಈ ಮಧ್ಯೆ, ‘ತೃಪ್ತಿ ದೇಸಾಯಿ ಅವರದ್ದು ಬಿಜೆಪಿ ಕೃಪಾಪೋಷಿತ ನಾಟಕ’ ಎಂದು ಟೀಕಿಸಿರುವ ಕೇರಳದ ಮುಜರಾಯಿ ಇಲಾಖೆ ಸಚಿವ ಕಡಕಂಪಲ್ಲಿ ಸುರೇಂದ್ರನ್, ತೃಪ್ತಿ ದೇಸಾಯಿ ಅವರ ಈ ಟ್ರಿಪ್ ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಪ್ರಾಯೋಜಕರು ಎಂದು ಆರೋಪಿಸಿದ್ದಾರೆ.

ಈ ಹಿಂದೆ, ಮಹಾರಾಷ್ಟ್ರದ ಶನಿಸಿಂಗಣಾಪುರ ದೇಗುಲದ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಲೆಕ್ಕಿಸದೆ, ದೇವರ ಮೂರ್ತಿ ಸ್ಪರ್ಶಿಸುವಲ್ಲಿ ಯಶಸ್ವಿಯಾಗಿ ತೃಪ್ತಿಪಟ್ಟಿದ್ದ ತೃಪ್ತಿ ದೇಸಾಯಿ ಮತ್ತು ತಂಡ, ಈ ಬಾರಿ ಶಬರಿಗಿರಿವಾಸನ ದರ್ಶನ ಮಾಡುವಲ್ಲಿ ಸಫಲವಾಗುವ ಸಾಧ್ಯತೆ ಕಡಿಮೆಯೆಂದೇ ಹೇಳಬೇಕು. ಈ ನಡುವೆ, ಶಬರಿಮಲೆ ಪರಿಸರದಲ್ಲಿನ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ