ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ!

BJP state leadership changes

16-11-2018

ರಾಜ್ಯದಲ್ಲಿ ನಡೆದ ಮೂರು ಲೋಕಸಭೆ ಹಾಗು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ನೀರಸ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಮುಂದಿನ ನಾಲ್ಕೈದು ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ತಕ್ಷಣವೇ ನಾಯಕತ್ವ ಬದಲಾವಣೆ ಮಾಡುವುದು ಬೇಡ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಯುವ ಮತ್ತು ಪಕ್ಷ ಕಟ್ಟುವ ಸಾಮರ್ಥ್ಯವಿರುವವರಿಗೆ ಪಕ್ಷದ ನಾಯಕತ್ವ ನೀಡುವುದು ಸೂಕ್ತ ಎನ್ನುವ ನಿಲುವಿಗೆ ಅಮಿತ್ ಶಾ ಬಂದಿದ್ದಾರೆ.

ಮಂಗಳೂರಿನಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಮತ್ತು ಪಕ್ಷದ ಕೆಲ ನಾಯಕರ ಜತೆ ಬುಧವಾರ ಚರ್ಚೆ ನಡೆಸಿದ ಸಂದರ್ಭದಲ್ಲಿ ಹೊಸ ನಾಯಕತ್ವ ಬೆಳೆಸುವ ಕುರಿತು ಶಾ ಸೂಚ್ಯವಾಗಿ ಹೇಳಿದ್ದಾರೆ. ಸಧ್ಯಕ್ಕೆ ನಾಯಕತ್ವ ಬದಲಾವಣೆ ಬೇಡ. ಮೊದಲು ಲೋಕಸಭಾ ಚುನಾವಣೆ ನಡೆಯಲಿ.  ಯಡಿಯೂರಪ್ಪ ಪ್ರಮುಖ ನಾಯಕರಾಗಿದ್ದು ಅವರಿಗೆ ಜಾತಿ ಬೆಂಬಲವೂ ಇರುವುದರಿಂದ, ಈಗ ಮಾಡದೆ ಚುನಾವಣೆಯ ನಂತರ ಹೊಸಬರಿಗೆ ಪಕ್ಷದ ನೇತೃತ್ವ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಚುನಾವಣೆ ತರುವಾಯ ಯಡಿಯೂರಪ್ಪ ಅವರ ಮನವೊಲಿಸಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.

ರಾಜ್ಯದ ಉಪಚುನಾವಣೆಯಲ್ಲಾದ ಸೋಲು ಮುಂದಿನ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಂಭವವಿದೆ. ಅದಕ್ಕಾಗಿ ಈಗಿನಿಂದಲೇ ಪಕ್ಷ ಬಲಪಡಿಸಲು ಒತ್ತು ನೀಡುವಂತೆಯೂ ಸಲಹೆ ಮಾಡಿದ್ದಾರೆ. ಶೀಘ್ರದಲ್ಲೇ ರಾಜ್ಯದ ಮುಖಂಡರ ಜತೆ ಚರ್ಚೆ ನಡೆಸಲಿರುವ ಅಮಿತ್ ಶಾ, ಪಕ್ಷ ಬಲವರ್ಧನೆಗೆ ಸೂಕ್ತ ನೀಲಿನಕ್ಷೆ ರೂಪಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.


ಸಂಬಂಧಿತ ಟ್ಯಾಗ್ಗಳು

ಬಿಜೆಪಿ ಲೋಕಸಭಾ Amit Shah leadership


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ