ಬಿಜೆಪಿ ಸೋಲಿಗೆ ಏನು ಕಾರಣ ?

What

06-11-2018

ಉಪಚುನಾವಣೆಯಲ್ಲಿ ಬಿಜೆಪಿಗೆ ಲಭಿಸಿದ ಹೀನಾಯ ಫಲಿತಾಂಶಕ್ಕೆ ಕಾರಣವೇನೆಂದು ನೋಡಿದರೆ ಕಣ್ಣಿಗೆ ರಾಚುವುದು ಬಿಜೆಪಿಯೊಳಗಿನ ನಿರುತ್ಸಾಹ. ಹಣದ ಕೊರತೆ ಇನ್ನೊಂದು ಕಾರಣ. ಈ ಉಪಚುನಾವಣೆಗೆ ಯಡಿಯೂರಪ್ಪನವರದ್ದೇ ಜವಾಬ್ದಾರಿ, ಅವರೇ ಖರ್ಚು ಮಾಡಲಿ ಎಂಬ ಮನಸ್ಥಿತಿ ಬಹಳ ದೊಡ್ಡ ಕಾರಣ. ಮಂಡ್ಯದಲ್ಲಿ ದುಡ್ಡುಳ್ಳ ಗಿರಾಕಿಗೆ ಟಿಕೆಟ್ ನೀಡಿ ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಬಿಜೆಪಿ, ಪಕ್ಷಾಂತರಿ ಚಂದ್ರಶೇಖರ್ ಗೆ ಟಿಕೆಟ್ ಕೊಟ್ಟು ರಾಮನಗರದಲ್ಲೂ ಸೋಲನುಭವಿಸಿತು. ರಾಮನಗರದಲ್ಲಿ ನಡೆದಿದ್ದು ಕಾಟಾಚಾರದ ಚುನಾವಣಾ. ಆ ಕ್ಷೇತ್ರದ ಘಟಾನುಘಟಿಗಳೆಲ್ಲ ಒಂದಾಗಿ ಚುನಾವಣೆಗೆ ಹೋದ ಮೇಲೆ ಬಿಜೆಪಿ ಯಾವ ರೀತಿಯಲ್ಲಿ ಜಯ ಸಿಗಬೇಕಾಗಿತ್ತು ಎಂಬುದೇ ಯಕ್ಷ ಪ್ರಶ್ನೆ. ಜಮಖಂಡಿಯಲ್ಲಿ ಶ್ರೀಕಾಂತ್ ಕುಲಕರ್ಣಿಗೆ ಟಿಕೆಟ್ ನೀಡಿದಾಗಲೇ ಇಂದೊಂದು ಸೋಲಲು ಮಾಡಿಕೊಂಡ ತಯಾರಿ ಎಂದು ಪಕ್ಷದೊಳಗೆ ಹೇಳಲಾಗಿತ್ತು, ಆದರೆ ಯಡಿಯೂರಪ್ಪ ಅವರಿಗೆ ಒಂದೆಡೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಕಳಂಕ ಇನ್ನೊಂದು ಕಡೆ ಹಣಕ್ಕೆ ಜಾತಿಗೆ ಟಿಕೆಟ್ ಮಾರಿಕೊಂಡ ಆರೋಪ ಬರುವ ಸಾಧ್ಯತೆ ಇತ್ತು. ಇವೆರಡರ ಮಧ್ಯೆ ಕುಲಕರ್ಣಿಗೆ ಟಿಕೆಟ್ ಕೊಡುವುದೇ ಲೇಸು ಎಂದು ನಿರ್ಧರಿಸಿಬಿಟ್ಟರು. ಹಾಗೆ ನೋಡಿದರೆ ನಿರಾಣಿ ಸಹೋದರ ಸ್ಪರ್ಧಿಸಿದ್ದರೂ ಗೆಲ್ಲುವ ಸಾಧ್ಯತೆ ಇರಲಿಲ್ಲ. ಹಾಗಿದ್ದಿದ್ದರೆ ಶ್ರೀರಾಮುಲು ಸಹೋದರಿ ಶಾಂತಾ ಬಳ್ಳಾರಿಯಲ್ಲಿ ಗೆಲ್ಲಬೇಕಿತ್ತು.

ಬಿಜೆಪಿ ತನ್ನ ಕಳೆಯನ್ನು ಕಳೆದುಕೊಂಡುಬಿಟ್ಟಿದೆ ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಹಣವಿದ್ದರೂ ಜಾತಿ ಇದ್ದರೂ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟದ ಮಾತೇ ಆಗಿತ್ತು. ಈಗ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ ಈ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಈ ಫಲಿತಾಂಶವನ್ನು ಬಳಸಿಕೊಂಡು ಯಡಿಯೂರಪ್ಪ ಅವರನ್ನು ಹಣಿಯುವ ಪ್ರಯತ್ನ ಆರಂಭವಾಗಿದೆ. ಬಿಜೆಪಿಯೊಳಗೆ ಭಿನ್ನಮತಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಯಾರೂ ಇಲ್ಲದಿರುವುದೇ ಅದಕ್ಕೆ ಕಾರಣ. ದುಡುಕು ಸ್ವಭಾವದ ಯಡಿಯೂರಪ್ಪ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಆದರೆ ಶಿವಮೊಗ್ಗದಂಥ ದೊಡ್ಡ ಜಿಲ್ಲೆಯನ್ನು ಬಹುತೇಕ ಹಿಡಿತದಲ್ಲಿಟ್ಟುಕೊಂಡಿರುವ ಅವರು ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬಂದಿರುವ ರೀತಿ, ಅವರನ್ನು ಅಷ್ಟು ಸುಲಭವಾಗಿ ತಿರಸ್ಕರಿಸಲು ಸಾಧ್ಯವಿಲ್ಲ ಎಂಬ ಸೂಚನೆಯನ್ನು ಅವರ ವಿರೋಧಿಗಳಿಗೆ ನೀಡಿದೆ.

ಹಾಗೆ ನೋಡಿದರೆ ಈ ಫಲಿತಾಂಶದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೀಗಲಿಕ್ಕೆ ಅಷ್ಟೊಂದು ಕಾರ್ಯಾಂಗಳೇನೂ ಇಲ್ಲ. ಎರಡೂ ಪಕ್ಷ ಸೇರಿ ಹೋರಾಡಿ ಬಿಜೆಪಿಯನ್ನು ಸೋಲಿಸುವಾಗ, ಎಲ್ಲಾದರೂ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದಾರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಎರಡೂ ಪಕ್ಷ ಸೇರಿ ಮಂಡ್ಯದಲ್ಲಿ ಮತ್ತು ಶಿವಮೊಗ್ಗದಲ್ಲಿ ಅಷ್ಟೊಂದು ಮತಗಳು ಬಂದಿವೆ. ರಾಮನಗರದಲ್ಲಿ ಅಭ್ಯರ್ಥಿ ನಿವೃತ್ತಿ ಪಡೆದ ಮೇಲೂ ಬಿಜೆಪಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ಮಠಗಳು ಬಂದಿವೆ. ಮುಂದಿನ ದಿನಗಳಲ್ಲಿ ತನ್ನ ತಪ್ಪನ್ನು ಸರಿಮಾಡಿಕೊಂಡರೆ ಬಿಜೆಪಿಗೆ ಗೆಲುವು ಕಷ್ಟದ ವಿಷಯವಲ್ಲ ಎಂದು ಅನಾಯಾಸವಾಗಿ ಹೇಳಬಹುದು. 


ಸಂಬಂಧಿತ ಟ್ಯಾಗ್ಗಳು

ಬಿಜೆಪಿ ಜಮಖಂಡಿ Bi-election Yeddyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ