ಸರ್ಕಾರ ಬೀಳಿಸುವುದು ಯಡಿಯೂರಪ್ಪಾಗೆ ಸಾಧ್ಯವಿಲ್ಲ!

Yeddyurappa can not be dropped by government

21-10-2018

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಇರುವವವರೆಗೆ ಬಿಜೆಪಿಗೆ ರಾಷ್ಟ ಮಟ್ಟದಲ್ಲಿ ಗೆಲುವು ಹೇಗೆ ಖಚಿತವೋ ಹಾಗೇ ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಇರುವವರೆಗೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಹಾಗೆ ನೋಡಿದರೆ ಇದು ಯಡಿಯೂರಪ್ಪನವರಿಗೆ ಕೊನೆಯ ಅವಕಾಶ. ಮತ್ತೊಮ್ಮೆ ಮುಖ್ಯಮಂತ್ರಿಯಾಗಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದ ಯಡಿಯೂರಪ್ಪ ಒಂದೆರಡು ದಿನಗಳ ಮುಖ್ಯಮಂತ್ರಿಯಾಗಿ ಆ ಶಪಥವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅವರು ಪುನಃ ಮುಖ್ಯ ಮಂತ್ರಿಯಾಗುತ್ತಾರೊ ಇಲ್ಲವೊ ಯಾರಿಗೂ ಗೊತ್ತಿಲ್ಲ. ಈ ಬಾರಿ ಅವಕಾಶ ಸಿಕ್ಕಿದ್ದೇ ದೊಡ್ಡದು. ಅವರ ವಯಸ್ಸು ಮತ್ತು ಆರೋಗ್ಯ ಅವರ ಪರವಾಗಿ ಇಲ್ಲ. ಹೃದಯದಲ್ಲಿ ಛಲ, ಮನಸ್ಸಿನಲ್ಲಿ ಹಠ ಇದ್ದರೂ ಈ ಕಾಂಗ್ರೆಸ್- ಜೆಡಿಎಸ್ ಮೈತ್ರಿಯನ್ನು ಹಣಿಯುವುದು ಅಷ್ಟು ಸುಲಭದ ವಿಚಾರವಲ್ಲ. ಅದರೊಂದಿಗೆ ಬಲವಾದ ಕಾರಣ ಮತ್ತು ಸರಿಯಾದ ಅವಕಾಶವಿಲ್ಲದೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದು ಬಿಜೆಪಿಯಲ್ಲೇ ಅನೇಕರಿಗೆ ಬೇಕಾಗಿಲ್ಲ.

ಕೆಲವು ಹಿರಿಯ ಬಿಜೆಪಿ ನಾಯಕರು ಹೇಳುವಂತೆ ಆ ಪಕ್ಷದಲ್ಲಿ ದೇವೇಗೌಡರ ಸಮರ್ಥಕರು ಅನೇಕರಿದ್ದಾರೆ. ಅವರು ಎಂದೂ ದೇವೇಗೌಡರ ಅಥವಾ ಕುಮಾರಸ್ವಾಮಿಯವರ ವಿರುದ್ಧ ಹೋಗುವುದಿರಲಿ ಮಾತನಾಡುವುದೂ ಇಲ್ಲ. ಈ ಮರ್ಮ ತಿಳಿದುಕೊಂಡೇ ಕುಮಾರಸ್ವಾಮಿಯವರು ಇಷ್ಟೊಂದು ವಿಶ್ವಾಸದಿಂದ ದೇವಸ್ಥಾನಗಳನ್ನು ಸುತ್ತಾಡಿಕೊಂಡಿರುವುದು ಎನ್ನುತ್ತಾರೆ ಅವರು.

ಕುಮಾರಸ್ವಾಮಿಯವರಿಗೂ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಅಭಯ ಇದೆ. ಸರ್ಕಾರ ಬೀಳುವ ಸ್ಥಿತಿ ಬಂದರೆ ಏನಾದರೂ ಮಾಡಿ ಉಳಿಸಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಕುಮಾರಸ್ವಾಮಿಯವರು ಜನರಿಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೂ ಕಾಂಗ್ರೆಸ್ ನವರು ಅವರಿಗೆ ಕೊಟ್ಟ ಮಾತನ್ನು ಉಳಿಸುತ್ತಾರೆ ಎಂಬ ನಂಬಿಕೆ ಇದೆ.

ಬಿಜೆಪಿ ಕೇಂದ್ರ ನಾಯಕರಿಗೂ ಈ ಕೆಸರು ಮಾಡುವ ಕೆಲಸ ಬೇಡ ಅನ್ನಿಸಿದೆ. ರಾಷ್ಟ್ರೀಯ ಚುನಾವಣೆಗೆ ಮೊದಲು ಇನ್ನೊಂದು ಇಕ್ಕಟ್ಟು ಸರಿಕಂಡುಬರುತ್ತಿಲ್ಲ. ಆದ್ದರಿಂದಲೇ ಅವರು ಯಡಿಯೂರಪ್ಪ ಕೈಗೆ ಸರ್ಕಾರ ಬೀಳಿಸುವ ಕೆಲಸ ಕೊಟ್ಟಿದ್ದಾರೆ. ಅದೇಕೆಂದರೆ ಯಡಿಯೂರಪ್ಪ ಕೈಯಲ್ಲಿ ಸರ್ಕಾರ ಬೀಳಿಸುವುದು ಸಾಧ್ಯವಿಲ್ಲ ಮತ್ತು ಅದು ಆಗದ ಕೆಲಸ ಕೂಡ ಎಂದು ಅವರಿಗೂ ಗೊತ್ತು. ಆದರೆ ಯಡಿಯೂರಪ್ಪ ಅವರಿಗೆ ಅದೇನೋ ಸಮಾಧಾನ. ತಮಗೆ ಹೈಕಮಾಂಡ್ ಒಂದು ಗುರುತರ ಜವಾಬ್ದಾರಿಯನ್ನು ನೀಡಿದೆ ಎಂಬ ಹೆಮ್ಮೆ. ಹಾಗೇ ಈ ಕೆಲಸದಲ್ಲಿ ಅವರು ಸೋತರೆ 'ನೋಡಿ ನಿಮಗೆ ಅವಕಾಶ ನೀಡಿಯಾಯಿತು ಇನ್ನು ನೀವು ಬೇರೆಯವರಿಗೆ ಅವಕಾಶ ನೀಡಿ' ಎಂದು ಹೇಳಿ ಅವರನ್ನು ಸ್ಥಾನದಿಂದ ಇಳಿಸುವುದು ಬಿಜೆಪಿ ಹೈಕಮಾಂಡ್ ಗೆ ಸುಲಭವಾಗುತ್ತದೆ. ಇದೆಲ್ಲದರ ಮಧ್ಯೆ ಚುನಾವಣೆ  ಮುಗಿದು ಕೇಂದ್ರದಲ್ಲಿ ಮುಂದಿನ ಸರ್ಕಾರ ನಿರ್ಮಾಣವಾಗುವ ತನಕ ಸಮ್ಮಿಶ್ರ ಸರ್ಕಾರ ಉಳಿದು ಬಿಡುತ್ತದೆ. ಆನಂತರ ರಾಜಕೀಯ ಹೇಗಿರುತ್ತದೆ ಎನ್ನುವ ಆಧಾರದ ಮೇಲೆ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಧ್ಯಕ್ಕಂತೂ ಕುಮಾರಸ್ವಾಮಿ ಸರ್ಕಾರ ಸುಭದ್ರವಾಗಿದೆ, ಯಡಿಯೂರಪ್ಪ ಭವಿಷ್ಯ ಅಭದ್ರವಾಗಿದೆ.


ಸಂಬಂಧಿತ ಟ್ಯಾಗ್ಗಳು

ರಾಹುಲ್ ಗಾಂಧಿ ಯಡಿಯೂರಪ್ಪ Congress Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ