ಇನ್ಫೋಸಿಸ್ ಅಧ್ಯಕ್ಷರಾದ ಸುಧಾಮೂರ್ತಿಯವರಿಂದ ದಸರಾ ಮಹೋತ್ಸವದ ಉದ್ಘಾಟನೆ

Countdown to the inauguration of the Mysore Dasara

09-10-2018

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಉದ್ಘಾಟನಾ ವೇದಿಕೆ ಸಿದ್ದಗೊಳ್ಳುತ್ತಿದೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ಬೆಳಿಗ್ಗೆ 7.05 ರಿಂದ 7:35ರಲ್ಲಿ ಸಲ್ಲುವ ಶುಭ ತುಲಾಲಗ್ನದಲ್ಲಿ ಇನ್ಫೋಸಿಸ್ ಅಧ್ಯಕ್ಷರಾದ ಸುಧಾಮೂರ್ತಿ ಅವರು 2018 ರ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. 9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಪ್ರವಾಸಿಗರು-ಮೈಸೂರಿಗರು ಈ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.  

ಅಕ್ಟೋಬರ್ 19 ರಂದು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ನಡೆಯಲಿದ್ದು, ಕ್ಯಾಪ್ಟನ್ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ದಸರಾ ನಿಮಿತ್ತ ಈ ಬಾರಿ ಸಾಂಸ್ಕೃತಿಕ ನಗರಿಯಲ್ಲಿ ಆಕರ್ಷಕ ಲ್ಯಾಂಟರ್ನ್ ಉತ್ಸವ ಏರ್ಪಾಡಾಗಿದೆ, ದಸರಾ ವಸ್ತುಪ್ರದರ್ಶನದ ಆವರಣದಲ್ಲಿ 90 ದಿನ ಬಣ್ಣದ ಬೆಳಕಿನ ಉತ್ಸವ, ನೋಡುಗರನ್ನು ಪುಳಕಗೊಳಿಸಲಿದೆ.

ದಸರಾ ವಸ್ತುಪ್ರದರ್ಶನಕ್ಕೆ ನಾಳೆ ಚಾಲನೆ ದೊರೆಯಲಿದ್ದು, 15 ಸಾವಿರ ಚದರ ಅಡಿ ಪ್ರದೇಶದಲ್ಲಿ `ಲ್ಯಾಂಟರ್ನ್ ಪಾರ್ಕ್' ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ.  ಇಲ್ಲಿ ಚೀನಾ ದೇಶದ 19 ಪರಿಣತರು ಬಣ್ಣ ಬಣ್ಣದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಲಿದ್ದಾರೆ. ಉತ್ಸವಕ್ಕಾಗಿ ವಿವಿಧ ಗಾತ್ರದ ವರ್ಣರಂಜಿತ ಆಕಾಶಬುಟ್ಟಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಈ ನಡುವೆ ದಸರಾ ಮಹೋತ್ಸವಕ್ಕೆ ಭದ್ರತೆ ಒದಗಿಸಲು  ಪೊಲೀಸ್ ಇಲಾಖೆ ಸಜ್ಜಾಗಿದೆ. ಈ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ. ದಸರಾ ಬಂದೂಭಸ್ತ್ ವ್ಯವಸ್ಥೆಯನ್ನು 2 ಹಂತದಲ್ಲಿ ಮಾಡಲಾಗಿದೆ. ನಾಳೆಯಿಂದ 17ರವರಗೆ ಮೊದಲನೇ ಹಂತವಾಗಿ, 18ಮತ್ತು 19ರ ತನಕ 2 ಹಂತಗಳಾಗಿ ಬಂದೂಬಸ್ತ್ ವ್ಯವಸ್ಥೆ ಗೊಳಿಸಲಾಗಿದೆ.

ನಗರದಲ್ಲಿ ಭದ್ರತೆಗಾಗಿ 5254ಸಿವಿಲ್ ಪೊಲೀಸ್,ಟ್ರಾಫಿಕ್ ಪೊಲೀಸ್,ಕೆಎಸ್‍ಆರ್‍ಪಿ,ಸಿಎಆರ್ ಮತ್ತು ಡಿಎಆರ್ 46 ತುಕಡಿಗಳು, 1600ಹೋಮ್ ಗಾಡ್ರ್ಸ್ ಹಾಗೂ 46 ಭದ್ರತಾ ತಪಾಸಣಾ ಪಡೆಗಳನ್ನ ನಿಯೋಜನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ತಿಳಿಸಿದ್ದಾರೆ.

ಹಾಗೆಯೇ 3 ಬಾಂಬ್ ನಿಷ್ಕ್ರಿಯದಳ,ಡಾಗ್ ಸ್ಕ್ವಾಡ್ ನಿಯೋಜಿಸಲಾಗಿದ್ದು,ಇದೇ ಮೊದಲ ಬಾರಿಗೆ ಮೊಬೈಲ್ ಕಮಾಂಡೋ ಸೆಂಟರ್ ಬಳಸಿಕೊಳ್ಳಲಾಗಿದೆ.ಜಂಬೂ ಸವಾರಿ ಮಾರ್ಗದಲ್ಲಿ 76 ಡ್ರೋಣ್ ಕ್ಯಾಮರಾಗಳು ಹಾಗೂ 40 ಕಡೆ ಹೆಲ್ಪ್ಡೆಸ್ಕ್ ಅಳವಡಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಹೇಳಿದರು.

ಮೈಸೂರು ನಗರದ ಪೊಲೀಸ್ ಘಟಕಕ್ಕೆ ಸರ್ಕಾರದಿಂದ ವಿತರಣೆಗೊಂಡಿರುವ ಹಲವು ವಿಶೇಷತೆಗಳಿರುವ ಸುಮಾರು2.5ಕೋಟಿ ಮೌಲ್ಯದ ಮೊಬೈಲ್ ಕಮಾಂಡ್ ಸೆಂಟರ್ ಬಸ್ಸನ್ನು ಈ ಬಾರಿ ದಸರಾ ಮಹೋತ್ಸವಕ್ಕೆ ಬಳಕೆ ಮಾಡಲಾಗುವುದು.ಈ ಬಸ್ ನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು,ಬಾಡಿ ವೊರ್ನ್ ಔಟ್ ಕ್ಯಾಮೆರಾಗಳು,ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೋ ಗ್ರಾಫಿ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.

ಮಕ್ಕಳು ಕಳೆದು ಹೋದ ಸಂದರ್ಭದಲ್ಲಿ ಹೆಲ್ಫ್ ಡೆಸ್ಕ್ ಮೂಲಕ ಪತ್ತೆಹಚ್ಚಬಹುದು. ನೆರೆ ಜಿಲ್ಲೆ ಹಾಗೂ ರಾಜ್ಯಗಳ ಅಪರಾಧಿಗಳು ಬಂದು ಅಪರಾಧ ಕೃತ್ಯ ವೆಸಗುವುದನ್ನ ತಡೆಗಟ್ಟುವ ಹಿನ್ನೆಲೆ ಅಕ್ಕ ಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಧಿಕಾರಿ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ದಸರಾ ವೇಳೆ ಯಾವುದೇ ಅಹಿತಕರ ಘಟನೆ ನಡೆದಲ್ಲಿ ತಕ್ಷಣ ಪೊಲೀಸ್ ವ್ಯವಸ್ಥೆ ಸ್ಥಳಕ್ಕೆ ತೆರಳಲು ಉತ್ತಮವಾದ ಗಸ್ತು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಮುಂಚಿತವಾಗಿಯೇ 16 ಅಗ್ನಿಶಾಮಕ ದಳ ಹಾಗೂ 17 ಆಂಬುಲೆನ್ಸ್‍ಗಳನ್ನ ನಿಯೋಜಿಸಲಾಗಿದೆ.

ಭದ್ರತೆ ದೃಷ್ಟಿಯಿಂದ ಖಾಯಂ ಸಿಸಿ ಕ್ಯಾಮೆರಾಗಳ ಜೊತೆಗೆ ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಒಟ್ಟು 86 ಸಿಸಿ ಕ್ಯಾಮೆರಾಗಳನ್ನ ಅಳವಡಿಸಿದೆ. ಈ ಸಿಸಿ ಕ್ಯಾಮೆರಾಗಳು ದಿನದ 24 ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ.

ನಾಳೆಯಿಂದ 19 ರವರಗೆ ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗುವುದು. ಅರಮನೆ ಸುತ್ತಮುತ್ತಲ ರಸ್ತೆಗಳು,ನ್ಯೂ ಎಸ್ ಆರ್ ರಸ್ತೆ, ಬಿ.ಎನ್ ರೋಡ್, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗುವುದು ಹಾಗೂ ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗುವುದು.ಕೆಎಸ್‍ಆರ್ಟಿಸಿ ಗ್ರಾಮಾಂತರ ಬಸ್ಸುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ