ವಿಷಾದ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

Vice President M Venkaiah Naidu expressed regret

09-10-2018

ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಹಣಬಲ ಮತ್ತು ತೋಳ್ಬಲ ಪ್ರದರ್ಶನಗೊಳ್ಳುತ್ತಿರುವುದು ದುರದೃಷ್ಟಕರ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ವಿಷಾದ ವ್ಯಕ್ತಪಡಿಸಿದ್ದಾರೆ.

ಸ್ಕೌಟ್ಸ್ ಮತ್ತು ಗೈಡ್ಸ್ನ ರಾಷ್ಟ್ರೀಯ ಆಯುಕ್ತರಾಗಿ ಮತ್ತು ಬೆಂಗಳೂರು ಮೇಯರ್ ಆಗಿ ಸೇವೆಸಲ್ಲಿಸಿದ್ದ ವಿ.ಪಿ.ದೀನದಯಾಳು ನಾಯ್ಡು ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ದೀನದಯಾಳು ನಾಯ್ಡು ಅವರ ಬದುಕು ಮತ್ತು ಸಾಧನೆ ಕುರಿತ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಉಪರಾಷ್ಟ್ರಪತಿಯವರು, ಸಚ್ಚಾರಿತ್ರ್ಯ ಮತ್ತು ನಾಯಕತ್ವ ಗುಣ ಇರುವವರು ಈ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಕರೆ ನೀಡಿದರು.

ಸೇವಾಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಯುವಜನರು ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ವೆಂಕಯ್ಯನಾಯ್ಡು ಸಲಹೆ ನೀಡಿದರು.

ಜಾಗತಿಕ ಹವಾಮಾನ ಬದಲಾವಣೆ ಗಂಭೀರ ಸಮಸ್ಯೆಯಾಗಿದ್ದು, ನೈಸರ್ಗಿಕ ಸಮತೋಲನದಲ್ಲಿ ಮಾನವ ಹಸ್ತಕ್ಷೇಪದಿಂದಾಗಿ ಪ್ರವಾಹದಂತಹ ವಿಕೋಪಗಳು ಸಂಭವಿಸುತ್ತಿವೆ. ಇದನ್ನು ತಡೆಯಲು ಎಲ್ಲರೂ ಕಟಿಬದ್ಧರಾಗಬೇಕು ಎಂದು ಉಪರಾಷ್ಟ್ರಪತಿ ಕರೆ ನೀಡಿದರು. 

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಮತ್ತಿತರ  ಗಣ್ಯರು ಭಾಗವಹಿಸಿದ್ದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ