ರಾಜಕೀಯದ ಸುಳಿಯಲ್ಲಿ ಕರ್ನಾಟಕ ಪೊಲೀಸ್

Karnataka Police in the collapse of politics

06-10-2018

ವಿಶ್ವದ ಯಾವುದೇ ಮುಂದುವರೆದ ರಾಷ್ಟ್ರದಲ್ಲಿ ನ್ಯಾಯ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ರಾಜಕೀಯ ಹಿಡಿತದಿಂದ ಹೊರಗಿರುತ್ತದೆ, ಆದರೆ ಭಾರತದಲ್ಲಿ ವಿಷಯವೇ ಬೇರೆ. ನ್ಯಾಯಾಧೀಶರ ನೇಮಕದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಪೊಲೀಸರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ರಾಜಕಾರಣಿಗಳಿಗೆ ಒಂದು ಚಟವಿದ್ದಂತೆ. ಅವಶ್ಯಕತೆ ಇಲ್ಲದಿದ್ದರೂ ಪೊಲೀಸ್ ಇಲಾಖೆಯಲ್ಲಿ ಮೂಗು ತೋರಿಸುವುದು ಭಾರತೀಯ ರಾಜಕಾರಣಿಗಳ ಜಾಯಮಾನ. ಹಾಗೆ ಮಾಡುತ್ತಾ ಇವತ್ತು ಕರ್ನಾಟಕದಲ್ಲಂತೂ ಪೊಲೀಸ್ ಇಲಾಖೆಯನ್ನು ದುರ್ಬಲ ಮಾಡಿಬಿಡಲಾಗಿದೆ.

ತಮಗೆ ಇಷ್ಟಬಂದ ಅಧಿಕಾರಿಗಳನ್ನು ತಮ್ಮ ಏರಿಯಾಕ್ಕೆ ಹಾಕಿಸಿಕೊಂಡು ಅವರ ಮೂಲಕ ಜನರ ಮೇಲೆ ಪ್ರಭಾವ ಬೀರುವುದು, ಆ ಪೊಲೀಸ್ ಅಧಿಕಾರಿಗಳು ತಾವು ಹೇಳಿದಂತೆ ವರ್ತಿಸುವಂತೆ ಮಾಡುವುದು, ರಾಜಕೀಯ ಆಟಗಳಲ್ಲಿ ಆ ಅಧಿಕಾರಿಗಳನ್ನು ಬಳಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ಕರ್ನಾಟಕದಲ್ಲಿ ಈಗ ಒಬ್ಬ ರಾಜಕಾರಣಿಯ ಹಸ್ತಕ್ಷೇಪವಿಲ್ಲದೆ ಯಾವುದೇ  ಸಬ್ ಇನ್ಸ್ಪೆಕ್ಟರ್ ಗೆ ಮೇಲ್ಪಟ್ಟ ಅಧಿಕಾರಿಯ ವರ್ಗಾವಣೆ ನಡೆಯುವುದಿಲ್ಲ.

ಈ ವರ್ಗಾವಣೆಗಳಲ್ಲಿ ಹಣದ ಪಾತ್ರವೂ ಹೆಚ್ಚಿದೆ. ರಾಜಕಾರಣಿಗಳೇ ಮುಂದೆ ನಿಂತು ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನ ಕಮಿಷನರ್ ಗಿರಿಗೆ ಯಾರು ಅತ್ಯಂತ ಸಮರ್ಥರು ಬರಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಆ ಅಧಿಕಾರಿ ಯಾರಿಗೆ ಹತ್ತಿರ, ಎಷ್ಟು ಸಂಪಾದಿಸಬಲ್ಲ, ಯಾವ ಜಾತಿಯವ ಎಂಬೆಲ್ಲ ಅಂಶಗಳು ಮುಖ್ಯವಾಗುತ್ತಿವೆ. ಮೇಲ್ವರ್ಗದವ ಎನ್ನುವ ಕಾರಣಕ್ಕೆ ಒಬ್ಬ ಸಮರ್ಥ  ಹಿರಿಯ ಅಧಿಕಾರಿಗೆ ಇನ್ನೂ ಆ ಪಟ್ಟ ಸಿಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಕಾರಣದಿಂದಲೇ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಅನೇಕ ರೌಡಿಗಳು ಆಳುವ ಪಕ್ಷಗಳ ಸದಸ್ಯರೂ ಆಗಿರುವುದರಿಂದ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿದಂತಾಗಿದೆ. ಅದೇ ರೀತಿ ಡ್ರಗ್ಸ್ ಮತ್ತು ವೇಶ್ಯಾವಾಟಿಕೆಯನ್ನು ತಡೆಗಟ್ಟಲೂ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ನಗರದಲ್ಲಿ ಜನರಲ್ಲಿ ಜಾಗೃತಿ ಇದ್ದೂ ಹೀಗೆ ನಡೇಯುತ್ತಿದ್ದ ಮೇಲೆ ಇನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲೂ ಅಸಾಧ್ಯ.

ಕರ್ನಾಟಕದಲ್ಲಿ ಈಗ ಕರ್ನಾಟಕ ಪೊಲೀಸ್ ಇಲ್ಲ ಬದಲಿಗೆ ಇಲ್ಲಿರುವುದು ಒಂದೊಂದು ಏರಿಯಾದ  ಪೊಲೀಸ್ ಇಲಾಖೆಗಳು, ಒಂದೊಂದು ಏರಿಯಾ ಪೊಲೀಸರೂ ಯಾರೂ ಮುಟ್ಟದ ರೀತಿಯಲ್ಲಿ ರಾಜಕೀಯ ಕೃಪೆಯಲ್ಲಿ ಸ್ವತಂತ್ರರಾಗಿ ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ರಾಜ್ಯದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ನೊಂದು ನುಡಿದಿದ್ದಾರೆ. ಬೂಟಾಟಿಕೆಯ ದಾಳಿಗಳನ್ನು ನಿಲ್ಲಿಸಿ ನಿಜವಾಗಿಯೂ ಪೊಲೀಸ್ ಇಲಾಖೆಯ ಸುಧಾರಣೆ ಮಾಡಿದರೆ ಕರ್ನಾಟಕದ ಸುರಕ್ಷತೆಯ ಹಾದಿಯಲ್ಲಿ ಅದು ಒಂದು ಪ್ರಮುಖ ಹೆಜ್ಜೆಯಾಗುತ್ತದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ