ಎಚ್ಚೆತ್ತುಕೊಳ್ಳದಿದ್ದರೆ ‘ಕೈ’ ಕೊಡೋದು ಗ್ಯಾರಂಟಿ..!?

Kannada News

03-06-2017

ರಾಜ್ಯದಲ್ಲಿ ಇನ್ನೇನು ಚುನಾವಣೆ ಹವಾ ಶುರುವಾಗ್ತಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನ ಸಭೆ ಚುನಾವಣೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಆಡಳಿತ ಪಕ್ಷ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಭಾರೀ ಪೈಪೋಟಿ ನಡೆಯಲಿದ್ದು ಈಗಾಗಲೇ ಚುನಾವಣೆ ಸಿದ್ಧತೆಗಳು ಆರಂಭಗೊಂಡಿವೆ.

ಮುಂಬರುವ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ಕೂಡಾ ಈಗಾಗಲೇ ತಯಾರಿ ಶುರುಮಾಡಿಕೊಂಡಿದೆ. ಹೈಕಮಾಂಡ್ , ಸಿದ್ದರಾಮಯ್ಯನವರ ಹೆಗಲಿಗೆ ಮುಂದಿನ ಎಲೆಕ್ಷನ್ ಜವಾಬ್ದಾರಿ ಹೊರಿಸಿದೆ. ಈಗಾಗಲೇ ಬಡವರು, ಕೆಳವರ್ಗದವರು, ಹಿಂದುಳಿದವರಿಗಾಗಿ ಹಲವಾರು  ಭಾಗ್ಯಗಳನ್ನು ಕೊಟ್ಟಿರುವ ಸರ್ಕಾರ ತನ್ನ ಅಭಿವೃದ್ಧಿ ಯೋಜನೆಗಳನ್ನೇ ಜನರ ಮುಂದಿಟ್ಟು ಮತಬೇಟೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಮಹಿಳೆಯರು, ಯುವಜನತೆ ಹಾಗೂ ಮಹಾನಗರವಾಸಿಗಳ ಅಭಿವೃದ್ಧಿಗೆ ನಿರ್ದಿಷ್ಟವಾಗಿರುವ ಕಾರ್ಯಕ್ರಮಗಳನ್ನು ರೂಪಿಸಲು ವಿಫಲವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಮೂರು ವರ್ಗಗಳ ಅಭಿವೃದ್ಧಿ ಕುರಿತು ಯಾವದೇ ಸ್ಪಷ್ಟ ನಿಲುವು ಕಾಂಗ್ರೆಸ್ ಗೆ ಇದ್ದಂತಿಲ್ಲ ಎಂದೂ ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಕೆಳವರ್ಗದವರಿಗೆ ಹತ್ತಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರೂ ಮಧ್ಯಮ ಹಾಗೂ ಮೇಲ್ವರ್ಗದವರಿಗೆ ಪ್ರಯೋಜನವಾಗುವಂತಹ ಯಾವುದೇ ಸರಿಯಾದ ಯೋಜನೆ ಜಾರಿಗೆ ತಂದಿಲ್ಲ ಅನ್ನೋದು ಜನರ ಅಭಿಪ್ರಾಯ.

ಮಹಾನಗರಗಳಲ್ಲಿ ಯಾವುದೇ ಸರಿಯಾದ ಮೂಲಭೂತ ಸೌಕರ್ಯಗನ್ನು ಒದಗಿಸಲಾಗಿಲ್ಲ. ಮಳೆಗಾಲ ಆರಂಭವಾದರೂ ಹೊಂಡ ಬಿದ್ದ ರಸ್ತೆಗಳೇ ಎಲ್ಲೆಡೆ ಕಾಣಸಿಗುತ್ತವೆ. ಎಲ್ಲೆಡೆ ನೀರು ನಿಂತು ಕೆಸರುಗದ್ದೆಯಂತಾಗೋ ರಸ್ತೆಗಳಲ್ಲಿ ಜನರು ಸಂಚರಿಸೋಕೆ ಭಯ ಪಡುವಂತಾಗಿದೆ. ಸರಿಯಾದ ಮೂಲಭೂತ ವ್ಯವಸ್ಥೆಗಳು ಎಲ್ಲ ಜನರನ್ನೂ ತಲುಪಿಲ್ಲ. ಜನರ ಜೀವನಮಟ್ಟ ಕೂಡ ಸುಧಾರಣೆಯಾಗಿಲ್ಲ.

ಇನ್ನಾದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಎಚ್ಚೆತ್ತು ಮಹಿಳೆಯರು, ಯುವಜನತೆ ಹಾಗೂ ಮಹಾನಗರವಾಸಿಗಳನ್ನು ಗಣನೆಗೆ ತೆಗೆದುಕೊಂಡು ಕೆಲವೊಂದಿಷ್ಟಾದರೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಲ್ಲಿ ಈ ವರ್ಗದ ಜನರು ‘ಕೈ’ ಹಿಡಿಯಬಹುದೇನೋ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಅವರ ಜನಪ್ರಿಯತೆಯನ್ನು ದಾಳವಾಗಿಟ್ಟುಕೊಂಡು ರಣತಂತ್ರ ರೂಪಿಸುತ್ತಿರುವ ಕಮಲ ಪಾಳಯದ ಎದುರು ಕಾಂಗ್ರೆಸ್ ತೀವ್ರ ಪೈಪೋಟಿಯನ್ನೇ ನೀಡಬೇಕಾಗುತ್ತೆ. ಈ ಮೂರು ವರ್ಗಗಳಿಗೆ ಸರಿಯಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದಲ್ಲಿ ಮಾತ್ರ ಜನ ‘ಕೈ’ ಗೆ ಮತ ನೀಡಿಯಾರು ಅನ್ನೋದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರೋ ಮಾತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ