ಅನಂತ್ ಕುಮಾರ್ ಬದಲಿಗೆ ಯಾರು?

Who replaces Ananth Kumar?

30-09-2018

ಕೇಂದ್ರ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿಯ ಹಿರಿಯ ರಾಜಕಾರಣಿ ಎಚ್ ಏನ್ ಅನಂತ್ ಕುಮಾರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ದಿಸುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತ್ತಿದೆ. ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಬಿಜೆಪಿಯಲ್ಲಿಯೇ ಅನಂತ್ ಕುಮಾರ್ ಅನಾರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ. ಅನಂತ್ ಕುಮಾರ್ ಸ್ಪರ್ಧಿಸದಿರುವ ಸಂದರ್ಭದಲ್ಲಿ ಆ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಬಗ್ಗೆ ಈಗಾಗಲೇ ಬಹಳ ತೀವ್ರವಾದ ಚರ್ಚೆ ನಡೆಯುತ್ತಿದೆ.

ಬಿಜೆಪಿಯಲ್ಲಿರುವ ಕೆಲವು ಬ್ರಾಹ್ಮಣ ನಾಯಕರು ಈಗಾಗಲೇ ಟಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಯನ್ನು ವ್ಯಕ್ತ ಪಡಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ  ಮತ್ತು ಇನ್ನೊಂದು ಕಡೆ ಸಂತೋಷ್ ಜೊತೆಗೂ ಕೂಡ ಒಳ್ಳೆಯ ಸಂಬಂಧ ಇರಿಸಿಕೊಳ್ಳದ ಅನಂತ್ ಕುಮಾರ್ ಪರ ಮಾತಾಡಲು ಬಿಜೆಪಿಯಲ್ಲಿ ಅನೇಕ ಮಂದಿ ಇಲ್ಲದಿದ್ದರೂ ಕೂಡ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಮೋದಿಯವರ ಬೆಂಬಲದೊಂದಿಗೆ ಅನಂತ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಮಡದಿ ತೇಜಸ್ವಿನಿಯವರಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದಮ್ಯ ಚೇತನ ಟ್ರಸ್ಟ್ ಮೂಲಕ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿರುವ ತೇಜಸ್ವಿನಿಯವರು ಅನೇಕ ಸಂದರ್ಭಗಳಲ್ಲಿ ತಮ್ಮ ಪತಿಯ ಕ್ಷೇತ್ರವನ್ನು ಅವರು ಇಲ್ಲದಿದ್ದಾಗ ತಾವೇ ನೋಡಿಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರಾಜಕೀಯದಲ್ಲಿ ಸಕ್ರಿಯವಾಗಿಲ್ಲದಿದ್ದರೂ ಬಹಳಷ್ಟು ರಾಜಕೀಯ ಚಾತುರ್ಯ ಹೊಂದಿದ ತೇಜಸ್ವಿನಿಯವರು ತಮ್ಮ ಪತಿಯ ಸ್ಥಾನವನ್ನು ಅಲಂಕರಿಸಬಲ್ಲರು ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಅನೇಕರಿಗೆ ಬೇರೆಯೇ ಮೂಲದಿಂದ ಒಬ್ಬ ಅಭ್ಯರ್ಥಿಯನ್ನು ಕರೆ ತರುವ ಮನಸ್ಸಿದೆ, ಆದರೆ ಅದು ಅಷ್ಟು ಸುಲಭದ ಮಾತಲ್ಲ. ಸಧ್ಯಕ್ಕಂತೂ ತೇಜಸ್ವಿನಿಯವರ ಉಮೇದುವಾರಿಕೆಯ ಬಗ್ಗೆಯೇ ಖಚಿತತೆ ಇದೆ. ತೇಜಸ್ವಿನಿಯವರ ಹೆಸರನ್ನು ಪ್ರಸ್ತಾಪಿಸಿದಾಗ ಪಕ್ಷದೊಳಗೇ ಬಹಳಷ್ಟು ವಿರೋಧ ಬರುವುದು ಸಹಜ. ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೂ ಗೆಲ್ಲಿಸಿಕೊಂಡು ಬರುವುದು ಸಾಧ್ಯವೇ ಎಂಬ ಪ್ರಶ್ನೆಗೂ ಉತ್ತರ ಹುಡುಕಲಾಗುತ್ತಿದೆ. ಈ ಎಲ್ಲಾ ಗೊಂದಲಗಳ ಮಧ್ಯೆ ಅನಂತ್ ಕುಮಾರ್ ಬೇಗ ಚೇತರಿಸಿಕೊಂಡು ವಾಪಸ್ ಬಂದರೆ ಸಾಕು ಎಂದು ಬಿಜೆಪಿಯಲ್ಲಿ ಇನ್ನೊಂದು ಗುಂಪು ಪ್ರಾರ್ಥಿಸುತ್ತಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ