ಇನ್ನೆರಡು ದಿನ ಮಳೆ: ತಗ್ಗು ಪ್ರದೇಶದ ಜನರಿಗೆ ಆತಂಕ

#Rain #Bengaluru #Subway

25-09-2018

ಬೆಂಗಳೂರು: ಕಳೆದೆಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಮಳೆಗೆ ನಗರದ ಜನತೆ ತತ್ತರಿಸಿ ಹೋಗಿದ್ದು, ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ತಗ್ಗು ಪ್ರದೇಶಗಳ ಜನತೆ ಆತಂಕಕ್ಕೆ ಸಿಲುಕಿದ್ದಾರೆ

ನಗರದಲ್ಲಿ ನಿನ್ನೆ ರಾತ್ರಿ 10 ಗಂಟೆಯಿಂದ ಆರಂಭವಾದ ಮಳೆಯು ಮಧ್ಯರಾತ್ರಿವರೆಗೆ ಧಾರಾಕಾರವಾಗಿ ಸುರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬಹುತೇಕ ಬಡಾವಣೆಗಳು, ರಸ್ತೆಗಳು ಜಲಾವೃತಗೊಂಡು ನಾಗರೀಕರು ಪರದಾಡುವಂತಾಗಿದೆ.

ಬನ್ನೇರುಘಟ್ಟ ರಸ್ತೆಯ ಸೌಪರ್ಣಿಕ ಮತ್ತು ವೆಗಾಸಿಟಿ ಅಪಾರ್ಟ್‍ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಮತ್ತೆ ಮಳೆ ನೀರು ತುಂಬಿ ನಿವಾಸಿಗಳು ಪರಿತಪಿಸುತ್ತಿದ್ದರೆ, ಹೆಬ್ಬಾಳ ಮೇಲ್ಸೇತುವೆ ಕೆಳಗೆ ಎರಡು ಅಡಿಗಿಂತಲೂ ಹೆಚ್ಚು ನೀರು ನಿಂತಿದ್ದು ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡು  ಕೆಂಪೇಗೌಡ ನಿಮಾನ ನಿಲ್ದಾಣ, ಯಲಹಂಕ, ಮತ್ತಿತರ ಕಡೆಗಳಿಗೆ ಹೋಗುವ ಬರುವ ವಾಹನಗಳು ಗಂಟೆಗಟ್ಟಲೆ ರಸ್ತೆ ಮೇಲೆ ನಿಲ್ಲುವಂತಾಗಿತ್ತು.

ಕೋಣನಕುಂಟೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾವಿರಾರು ರೂ. ಮೌಲ್ಯದ ಸೋಫಾ ಸೆಟ್, ಟಿವಿ, ಮಂಚ, ಆಹಾರ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಮಾರೇನಹಳ್ಳಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಬೈಕ್‍ಗಳು ಹೆಚ್ಚು ಕಡಿಮೆ ಮುಳುಗಿ ಹೋಗಿವೆ. ಮೊನ್ನೆ ರಾತ್ರಿ ಸುರಿದ ಮಳೆಗೆ ನಾಯಂಡನಹಳ್ಳಿಯಲ್ಲಿ ದೊಡ್ಡ ಅವಾಂತರ ಸೃಷ್ಠಿಯಾಗಿತ್ತು. ಮಳೆಯಿಂದಾಗಿ ದೊಡ್ಡ ದೊಡ್ಡ ವಾಹನಗಳು ನೀರಿನಲ್ಲಿ ಸಿಲುಕಿದ್ದರಿಂದ ಸಂಚಾರ ದಟ್ಟಣೆಯುಂಟಾಗಿತ್ತು.

ನಗರದ ಹಲವೆಡೆ ರಸ್ತೆಗಳಲ್ಲಿ ಸೇತುವೆ ಕೆಳಗೆ ನೀರು ತುಂಬಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿರುವುದನ್ನು ಸುಗಮಗೊಳಿಸಲು ಸಂಚಾರ ಪೊಲೀಸರು ಸಂಚಾರ ದಟ್ಟಣೆ ತಡೆಗಟ್ಟುವಲ್ಲಿ ಹೈರಾಣಾಗಿ ಹೋಗಿದ್ದಾರೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ಕೆಲ ಕಾರುಗಳ ಒಳಗೂ ನೀರು ನುಗ್ಗಿ ಸ್ಥಳದಲ್ಲೇ ಕೆಟ್ಟು ನಿಂತ ಘಟನೆಯೂ ನಡೆಯಿತು. ಇದರಿಂದ ಮತ್ತಷ್ಟು ಸಂಚಾರ ದಟ್ಟಣೆ ಉಂಟಾಯಿತು.

ಬನ್ನೇರುಘಟ್ಟ ರಸ್ತೆಯಲ್ಲಿನ ಮೇಘ ಫ್ಲವರ್ ಹೈಟ್ ಅಪಾರ್ಟ್‍ಮೆಂಟ್‍ನ ನೆಲ ಅಂತಸ್ತಿಗೂ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ. ಅಪಾರ್ಟ್‍ಮೆಂಟ್‍ನ ಮುಂಭಾಗದ ರಸ್ತೆಯಲ್ಲೂ ರಾತ್ರಿ ನಿಂತ ನೀರು ಇಂದು ಬೆಳಿಗ್ಗೆಯೂ ಅಲ್ಲೇ ಉಳಿದಿದ್ದರಿಂದ ನಿವಾಸಿಗಳು ಹೊರ ಬರಲು ಸಾಧ್ಯವಾಗದೆ ಮನೆಗಳಲ್ಲೇ ಉಳಿಯಬೇಕಾಯಿತು.

ಅಪಾರ್ಟ್‍ಮೆಂಟ್‍ನ ಸಮೀಪದಲ್ಲೆ ಇರುವ ರಾಜಕಾಲುವೆ ತುಂಬಿದ್ದಿಂದ ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿದ್ದು ರಾಜಕಾಲುವೆಯಲ್ಲಿನ ಹೂಳು ತೆಗೆಯದೆ ಇದುದ್ದರಿಂದಲೇ ಈ ಪರಿಸ್ಥಿತಿಯುಂಟಾಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸ್ಮೆಂಟ್‍ನಲ್ಲಿ ನುಗ್ಗಿದ್ದ ಮಳೆ ನೀರು ತೆರವುಗೊಳಿಸಲು ಬಂದ ಬಿಬಿಎಂಪಿ ಸಿಬ್ಬಂದಿಗಳ ವಿರುದ್ಧ ಕೆಲ ನಿವಾಸಿಗಳು ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು.

ಮೈಸೂರು ರಸ್ತೆಯ ರಾಜಕಾಲುವೆಯಿಂದ ಹರಿದ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ಜನರು ರಾತ್ರಿಯಿಡೀ ಜಾಗರಣೆ ನಡೆಸಬೇಕಾಯಿತು.

ನವೋದಯ ನಗರದಲ್ಲಿ ರಸ್ತೆಗಳು ಮಳೆಯಿಂದ ಮಿನಿ ಕೆರೆಗಳಂತಾಗಿದ್ದವು. ಗುಡುಗು-ಮಿಂಚು ಸಹಿತ ಮಳೆ ಬಂದಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡು ರಾತ್ರಿಯೆಲ್ಲ ಕಗ್ಗತ್ತಲು ಉಂಟಾಗಿತ್ತು. ಬೆಳಿಗ್ಗೆ ಮನೆಯಿಂದ ಹೊರ ಬಂದ ನಿವಾಸಿಗಳು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಹೊರ ಬರಲಾಗದೆ ಮನೆಯಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತರಾತುರಿಯಲ್ಲಿ ಉದ್ಘಾಟಿಸಿದ್ದ ಓಕಳಿಪುರಂ ಅಂಡರ್ ಪಾಸ್ ನಲ್ಲಿ ಎರಡು ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ವಾಹನ ಚಲಾಯಿಸಲಾಗದೆ ಪರದಾಡಿದ್ದಾರೆ. ಅಂಡರ್ ಪಾಸ್ ನ ಮೇಲ್ಭಾಗ ಸತತ 2 ದಿನಗಳ ಮಳೆಯಿಂದಾಗಿ ಸೋರುತ್ತಿದ್ದು, ಅಂಡರ್ ಪಾಸ್ ಗುಣಮಟ್ಟದ ಬಗ್ಗೆ ವಾಹನ ಸವಾರರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜಾಜಿನಗರವನ್ನು ಸಂಪರ್ಕಿಸುವ ಮೇಲ್ಸೇತುವೆ ಇದಾಗಿದ್ದು, ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ವಾಹನ ಸವಾರರು ಸಾಹಸದಿಂದಲೇ ವಾಹನ ಚಲಾಯಿಸಿದ್ದಾರೆ.

ಸತತ ಮಳೆಯಿಂದಾಗಿ ರಾಜಾಜಿನಗರದ ನವರಂಗ್ ಟಾಕೀಸ್ ಬಳಿಯ ಪಾದಚಾರಿ ಮಾರ್ಗವು  1 ಮೀ.ವರೆಗೆ ಸಂಪೂರ್ಣ ಕುಸಿದು ಪಾದಚಾರಿಗಳು ನಡೆದಾಡಲು ಪರದಾಡುವಂತಾಯಿತು. ಬಿಬಿಎಂಪಿಗೆ ಸುದ್ದಿ ತಿಳಿಸಿದ್ದರೂ ಯಾರೊಬ್ಬರೂ ಸ್ಥಳಕ್ಕೆ ಬಂದಿಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ

ಎರಡು ದಿನಗಳ ಕಾಲ ಸುರಿದ ಮಳೆಗೆ ರಸ್ತೆಯಲ್ಲಿ ಗುಂಡಿಗಳು ಪ್ರತ್ಯಕ್ಷಗೊಂಡಿವೆ. ಹೈಕೋರ್ಟ್ ಸೂಚನೆಯಂತೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಮಳೆ ಶಾಪವಾಗಿ ಪರಿಣಮಿಸಿದೆ. ನಾಯಂಡನಹಳ್ಳಿ, ನಾಗರಬಾವಿ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಸಿಲ್ಕ್ ಬೋರ್ಡ್, ಮತ್ತಿಕೆರೆ, ಜೆಪಿನಗರ, ಮಲ್ಲೇಶ್ವರಂ ಮತ್ತಿತರ ಕಡೆ ಇದ್ದ ಗುಂಡಿಗಳನ್ನು ಡಾಂಬರ್ ಹಾಕಿ ಮುಚ್ಚಿದ್ದರೂ ಮತ್ತೆ ಕಿತ್ತು ಬಂದು ಯಥಾಪ್ರಕಾರ ಗುಂಡಿಗಳು ಕಾಣಿಸಿಕೊಂಡಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.


ಸಂಬಂಧಿತ ಟ್ಯಾಗ್ಗಳು

Bengaluru Rain ಸಿಲ್ಕ್ ಬೋರ್ಡ್ ರಾಜಾಜಿನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ