ಜಿಟಿಡಿ ಉಸ್ತುವಾರಿಗೆ ಸಾರಾ ಮಹೇಶ್ ಕತ್ತರಿ

Sarah Mahesh Cauvery for GTD caretaker

25-09-2018

ಬಿಜೆಪಿ ಏನೆಲ್ಲಾ ಕಸರತ್ತು ಮಾಡಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಹೊರಗಟ್ಟಲು ಪ್ರಯತ್ನಿಸಿತ್ತಿರುವ ಬೆನ್ನಲ್ಲೇ ಮೈಸೂರಿನಲ್ಲಿ ಜೆಡಿಎಸ್ ನ ಸಚಿವರೊಬ್ಬರು ಆ ಪಕ್ಷದ ಇನ್ನೊಬ್ಬ ಸಚಿವರನ್ನು ಮೂಲೆಗುಂಪು ಮಾಡಲು ಹೊರಟಿರುವ ಸುದ್ದಿ ಹೊರಬಿದ್ದಿದೆ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಯಿತು. ಮೈಸೂರು ಜಿಲ್ಲೆಯ ಉಸ್ತುವಾರಿ ಬೇಕೆಂದಿದ್ದ ಸಚಿವ ಸಾರಾ ಮಹೇಶ್ ಗೆ ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಯಿತು. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ಹೊತ್ತ ಸಾರಾ ಮಹೇಶ್ ಮನಸ್ಸಿಲ್ಲದ ಮನಸ್ಸಿನಲ್ಲೇ ಕೊಡಗಿನ ಕಡೆ ಹೊರಟರು. ಕೊಡಗಿನಲ್ಲಿ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾದಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಒಳ್ಳೆಯ ಹೆಸರನ್ನೂ ಗಳಿಸಿದರು. ಆದರೂ ಮೈಸೂರು ಜಿಲ್ಲೆಯ ಉಸ್ತುವಾರಿ ತಪ್ಪಿದ್ದರ ಬಗ್ಗೆ ಅವರಲ್ಲಿ ಅಸಮಾಧಾನ ಇದ್ದೇ ಇತ್ತು.

ಈ ಮಧ್ಯೆ ತಾವು ಒಲ್ಲದ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಇಷ್ಟವಿಲ್ಲದೆಯೂ ತಮ್ಮದಾಗಿಸಿಕೊಂಡು ಜಿ ಟಿ ದೇವೇಗೌಡ ಮೈಸೂರು ಜಿಲ್ಲೆಯ ಉಸ್ತುವಾರಿ ಲಭಿಸಿದಾಗ ಒಂದಷ್ಟು ಸಮಾಧಾನ ಪಟ್ಟುಕೊಂಡರು. ಆದರೆ ಈಗ ಅದೂ ಕೂಡ ಅವರ ಕೈ ಜಾರುತ್ತಿರುವಂತೆ ಕಂಡು ಬರುತ್ತಿದೆ. ಮೈಸೂರಿನ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದ ಸಾರ ಮಹೇಶ್ ದಸರಾ ಹೆಸರಲ್ಲಿ ತಮ್ಮ ಪ್ರವಾಸೋದ್ಯಮ ಇಲಾಖೆಯ ಅಧಿಕಾರವನ್ನು ಬಳಸಿ ಮೈಸೂರಿನಲ್ಲೇ ಠಿಕಾಣಿ ಹೂಡಿ, ಈಗ ಮೈಸೂರಿನ ಉಸ್ತುವಾರಿ ಮಂತ್ರಿಯಂತೆಯೇ ನಡೆದುಕೊಳ್ಳುತ್ತಿದ್ದಾರೆ. ಮಿತಭಾಷಿ, ಸ್ನೇಹಜೀವಿ, ಹಿರಿಯ ರಾಜಕಾರಣಿ ಜಿ ಟಿ ದೇವೇಗೌಡ ದಸರಾದ ಗೌರವಕ್ಕೆ ಧಕ್ಕೆ ಬರಬಾರದು ಎಂದು ಆರಂಭದಲ್ಲಿ ಈ ಎಲ್ಲಾ ಹಸ್ತಕ್ಷೇಪಗಳನ್ನು ಸಹಿಸುತ್ತಾ ಬಂದರು , ಆದರೆ ಈಗ ಸಾರ ಮಹೇಶ್ ಅವರ ಉಪಟಳ ಹೆಚ್ಚಾಗುತ್ತಿರುವಂತೆ ಕಂಡುಬರುತ್ತಿದೆ.

ದಿನೇ ದಿನೇ  ಮೈಸೂರಿನಲ್ಲಿ ಎಲ್ಲಾ ವಿಚಾರಗಳಲ್ಲೂ ಮೂಗು ತೋರಿಸುತ್ತಿರುವ ಸಾರಾ ಮಹೇಶ್ ತಾವೇ ಉಸ್ತುವಾರಿ ಮಂತ್ರಿಗಳು ಎಂಬಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳಿಗೆ ಆದೇಶ ನೀಡುವುದು, ಕಡತಗಳನ್ನು ಪರೀಕ್ಷಿಸುವುದು, ಮೀಟಿಂಗ್ ಕರೆಯುವುದು ಹೀಗೆ ಮಾಡುತ್ತಾ ನಿಜವಾದ ಉಸ್ತುವಾರಿ ಸಚಿವರನ್ನು ಉಪೇಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯ ಒತ್ತಡದ ಕಾರಣದಿಂದಾಗಿ ಜಿಟಿಡಿ ಬೆಂಗಳೂರಿನಲ್ಲೇ ಹೆಚ್ಚು ಸಮಯ ಕಳೆಯಬೇಕಾಗಿ ಬಂದಿರುವುದರಿಂದ, ಆ ಸಂದರ್ಭದ ಲಾಭ ಪಡೆದುಕೊಂಡು ಸಾರ ಮಹೇಶ್ ಮೈಸೂರಿನಲ್ಲಿ ಆವರಿಸಿಕೊಂಡುಬಿಟ್ಟಿದ್ದಾರೆ.

ದಸರಾ ವಿಚಾರದಲ್ಲಂತೂ ಜಿಟಿಡಿ ಯವರಿಗೆ ಯಾವ ಕೆಲಸವೂ ಇಲ್ಲ ಎಂಬಂತೆ ಸಾರಾ ಮಹೇಶ್ ಉಸ್ತುವಾರಿ ಮಂತ್ರಿಗಳನ್ನು ಕಡೆಗಣಿಸಿಬಿಟ್ಟಿದ್ದಾರೆ. ದಸರಾದ ಯಾವುದೇ ವಿಚಾರದಲ್ಲೂ ಜಿ ಟಿ ದೇವೇಗೌಡರಿಗೆ ಬೆಲೆಯೇ ಇಲ್ಲ, ಅವರ ಅಭಿಪ್ರಾಯಗಳನ್ನೂ ತೆಗೆದುಕೊಳ್ಳಲಾಗುತ್ತಿಲ್ಲ. ಇತ್ತೀಚೆಗೆ ಹೊರ ಬಂದ ದಸರಾದ ಕೆಲವು ಅಧಿಕೃತ ಪೋಸ್ಟರ್ಗಳಲ್ಲಿ ಜಿಟಿಡಿ ಫೋಟೋ ಮಾಯವಾಗಿರುವುದು ಜಿಟಿಡಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಸಿದ್ದರಾಮಯ್ಯ ಅವರನ್ನು ಸೋಲಿಸಿ ಜಯಂಟ್ ಕಿಲ್ಲರ್ ಆಗಿ ಜೆಡಿಎಸ್ ಗೆ ಕೀರ್ತಿ ತಂದು ಕೊಟ್ಟ ಜಿಟಿಡಿ ಈಗ ಏಕಾಂಗಿ ಹೋರಾಟ ಮಾಡಬೇಕಾಗಿ ಬಂದಿದೆ. ಕೊಡಗಿನ ಉಸ್ತುವಾರಿ ಮಂತ್ರಿಯಾದ ಸಾರ ಮಹೇಶ್ ಅವರಿಗೆ ಕೊಡಗಿನಲ್ಲೇ ಮಾಡಲು ಬಹಳಷ್ಟು ಕೆಲಸಗಳಿವೆ. ಅಲ್ಲಿ ಇನ್ನೂ ಪರಿಹಾರ ಕಾರ್ಯ ಸರಿಯಾಗಿ ನಡೆದಿಲ್ಲ, ಜನರ ಬವಣೆ ಕೊನೆಯಾಗಿಲ್ಲ. ಆದರೆ ಅದನ್ನೆಲ್ಲ ಬಿಟ್ಟು ಮೈಸೂರಿನಲ್ಲಿ ಇನ್ನೊಬ್ಬ ಮಂತ್ರಿಯ ಕುರ್ಚಿಗೆ ಲಗ್ಗೆ ಹಾಕುತ್ತಿರುವುದು ಎಷ್ಟು ಸೂಕ್ತ ಎಂದು ಮೈಸೂರಿನವರೇ ಅನೇಕರು ಕೇಳುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ತಾಳ್ಮೆಯ ಮೂರ್ತಿಯಂತಿರುವ ಜಿ ಟಿ  ದೇವೇಗೌಡರ ಸಿಟ್ಟು ಸ್ಫೋಟಗೊಳ್ಳುವುದು ಸಹಜ. ಪರಿಸ್ಥಿತಿ ಇನ್ನೂ ಹದಗೆಡುವ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅಥವ ದೊಡ್ಡಗೌಡರು ಮೈಸೂರಿನ ಕಡೆ ಗಮನ ಹರಿಸಿದರೆ ಒಬ್ಬ ಪ್ರಮುಖ ನಾಯಕನನ್ನು ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಜಿಟಿಡಿ ಅಭಿಮಾನಿಗಳು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ