ಸಹಕಾರ ಸಂಘಗಳಲ್ಲಿ ರೈತರ ಸಾಲಮನ್ನಾ: ಆದೇಶ ತಿದ್ದುಪಡಿ!

#Bandeppa Kashempur #Loan waiver #Co Operative Banks

24-09-2018

ಬೆಂಗಳೂರು: ಬೆಳೆಸಾಲಮನ್ನಾ ಯೋಜನೆ ಹೊಸ ಮಾರ್ಗ ಸೂಚಿಯನ್ನು ತಿದ್ದುಪಡಿಯೊಂದಿಗೆ ಜಾರಿಗೊಳಿಸಲಾಗಿದ್ದು, ಠೇವಣಿ ಇಟ್ಟಿದ್ದರೂ ಅಂತಹವರ ಸಾಲ ಸಹ ಮನ್ನಾವಾಗಲಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ರೈತರು ಠೇವಣಿ ಇಟ್ಟಿದ್ದರೂ ಅವರ ಸಾಲ ಮನ್ನಾ ಮಾಡುವ ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಎಷ್ಟೇ ಹಣ ಠೇವಣಿ ಇಟ್ಟಿರಲಿ ಅವರಿಗೂ ಸಾಲ ಮನ್ನಾ ಅನ್ವಯವಾಗಲಿದೆ. ಈ ಹಿಂದೆ ಸಹಕಾರಿ ಬ್ಯಾಂಕ್‍ಗಳಲ್ಲಿ ಹಣ ಠೇವಣಿ ಇಟ್ಟಿದ್ದರೆ ಅಂತಹ ರೈತರು ಸಾಲ ಮನ್ನಾ ವ್ಯಾಪ್ತಿಗೆ ಬರುತ್ತಿರಲಿಲ್ಲ. ಹಾಗಾಗಿ ಹಿಂದಿನ ಸರ್ಕಾರಿ ಆದೇಶವನ್ನು ಮಾರ್ಪಾಡು ಮಾಡಿ ಹೊಸ ಆದೇಶವನ್ನು ಹೊರಡಿಸಲಾಗಿದೆ ಎಂದರು.

ರೈತರು ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟಿದ್ದರೆ ಸಾಲ ಮನ್ನಾದ ಸಂದರ್ಭದಲ್ಲಿ ಅಂತಹ ಮೊತ್ತವನ್ನು ಹೊರ ಬಾಕಿಯಲ್ಲಿ ಕಳೆಯತಕ್ಕದ್ದು ಎಂಬ ಷರತ್ತನ್ನು ಕೈಬಿಡಲು ನಿರ್ಧರಿಸಲಾಗಿದೆ. ಇದರಿಂದ 22ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಅಕ್ಟೋಬರ್ 15ರವೇಳೆಗೆ ಋಣಮುಕ್ತ ಪತ್ರ ನೀಡುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದು, ಒಟ್ಟು 9 ಸಾವಿರ 448 ಕೋಟಿ ಸಹಕಾರ ಕ್ಷೇತ್ರದ ಸಾಲಮನ್ನಾ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಜುಲೈ10, 2018ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ ಒಂದು ಲಕ್ಷ ವರೆಗಿನ ಸಾಲ ಮನ್ನಾ ಮಾಡುವ ಪ್ರಸ್ತಾವನೆಗೆ ಸರ್ಕಾರಿ ಆದೇಶ ಈಗಾಗಲೇ ಹೊರಬಿದ್ದಿದೆ ಎಂದು ಹೇಳಿದರು.

ಯೋಜನೆಯಲ್ಲಿ ಸಾಲಮನ್ನಾ ಆಗುವ ಅನುದಾನವನ್ನು ನೇರ ಬ್ಯಾಂಕಿಗ್ ವರ್ಗಾವಣೆ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗುವುದು ಬೆಳೆಸಾಲ ಪಡೆದ ರೈತರು ಸಹಕಾರಿ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು ಪ್ರತಿ ತಿಂಗಳು ಒಟ್ಟಾರೆ 20ಸಾವಿರಕ್ಕಿಂತ ಹೆಚ್ಚಿನ ವೇತನ ಹಾಗೂ ಪಿಂಚಣಿ ಪಡೆಯುತ್ತಿದ್ದಲ್ಲಿ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಬಂಡೆಪ್ಪ ಕಾಶೆಂಪೂರ್ ಸ್ಪಷ್ಟಪಡಿಸಿದರು.

ಮುಂಬರುವ ಜುಲೈ ತಿಂಗಳ ಒಳಗಾಗಿ ಸಹಕಾರ ಬ್ಯಾಂಕ್‍ಗಳ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಈಗಾಗಲೇ ಪ್ರತಿ ತಿಂಗಳು ಸರ್ಕಾರ ಸಾಲ ಮನ್ನಾ ಮೊತ್ತವನ್ನು ನೀಡುತ್ತಿದೆ. ದಸರಾ ಹಾಗೂ ದೀಪಾವಳಿ ಹಬ್ಬದವರೆಗೆ ಸುಮಾರು 22 ಲಕ್ಷ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಉಳಿದ 2 ರಿಂದ 3 ಸಾವಿರ ರೈತರ ಸಾಲ ಮನ್ನಾ ಜುಲೈ ತಿಂಗಳವರೆಗೆ ಆಗಲಿದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಸಾಲದಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನೋವು ತಂದಿದೆ. ಸರ್ಕಾರ ರೈತರ ಜತೆಗಿದೆ. ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಸಚಿವ ಬಂಡೆಪ್ಪಕಾಶಂಪೂರ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Bandeppa Kashempur Loan waiver ಆತ್ಮಹತ್ಯೆ ಧೈರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ