ಧಾರಾಕಾರ ಮಳೆಗೆ ಪರದಾಡಿದ ನಗರ ನಿವಾಸಿಗಳು

#Bengaluru # Rain # Apartments #School

24-09-2018

ಬೆಂಗಳೂರು: ಕೆಲ ದಿನಗಳ ನಂತರ ನಗರದಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ  ಜೆ.ಪಿ.ನಗರ, ಆರ್.ಆರ್. ನಗರ, ಗೊಟ್ಟಿಗೆರೆ, ಬನ್ನೇರುಘಟ್ಟ ಇನ್ನಿತರ ಕಡೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.

ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದ ಕೆಂಗೇರಿ, ನಾಗರಭಾವಿ, ಮಲ್ಲೇಶ್ವರಂ, ಮೆಜೆಸ್ಟಿಕ್, ಸದಾಶಿವನಗರ, ಕೋರಮಂಗಲ, ರಾಜಾಜಿನಗರ ಸೇರಿ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಸ್ಥಳೀಯರು ಜಾಗರಣೆ ಮಾಡುವಂತಾಗಿತ್ತು.

ಬನ್ನೇರುಘಟ್ಟ ಪ್ರದೇಶದ ಹಯಗಿರಿ ಅಪಾರ್ಟ್ ಮೆಂಟ್ ರಸ್ತೆಯಲ್ಲಿ ಮಳೆ ನೀರು ನಿಂತು ನದಿಯಂತಾಗಿತ್ತು. ಬೆಳಿಗ್ಗೆ 10 ಗಂಟೆಯಾದರೂ ಈ ರಸ್ತೆಯಲ್ಲಿ ನೀರು ಹೊರಹೊಗದೇ ಇದ್ದ ಪರಿಣಾಮ ನಿಂತ ನೀರಿನಲ್ಲಿ ವಾಹನ ಸವಾರರು ವಾಹನ ಚಲಾಯಿಸಿದರು. ಗೊಟ್ಟಿಗೆರೆಯ ಎಂ.ಎಲ್.ಎ ಲೇಔಟ್ ನ ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ನಲ್ಲಿ ನಿಂತಿದ್ದ ಕಾರುಗಳು ಜಲಾವೃತ ಗೊಂಡಿದ್ದವು.

ಜೆ.ಪಿ.ನಗರದ ಸೌಪರ್ಣಿಕ ಮತ್ತು ವೆಗಾ ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿ ಬೆಳಿಗ್ಗೆ ಕಾರು ತೆಗೆಯಲು ಹೋದಾಗ ಎರಡು ಅಪಾರ್ಟ್ ಮೆಂಟ್ ಗಳಲ್ಲಿ ನೀರು ನುಗ್ಗಿರುವುದು ಕಂಡ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಪಂಪ್‍ನಿಂದ ನೀರು ಹೊರ ಹಾಕಿದ್ದಾರೆ.

ರಾಜ ರಾಜೇಶ್ವರಿ ನಗರದ ಇಂಡಿಯನ್ ಬ್ಯಾಂಕ್ ಕಾಲೋನಿಯಲ್ಲಿ ಕಟ್ಟಡವೊಂದರ ಅವಶೇಷಗಳನ್ನು ಚರಂಡಿಗೆ ತುಂಬಿದ್ದರ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ಐದಕ್ಕೂ ಹೆಚ್ಚು ಮನೆಗಳ ಸೆಲ್ಲರ್ ಗಳಿಗೆ ನೀರು ನುಗ್ಗಿದೆ. ಇಲ್ಲಿನ ರಂಗ ಮಂದಿರದ ಸಮೀಪದ ಮನೆಗಳ ಬೇಸ್ ಮೆಂಟ್‍ಗೆ ನೀರು ನುಗ್ಗಿದ್ದು ಬೆಳಿಗ್ಗೆ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ನೀರು ತೆರವುಗೊಳಿಸಿದ್ದಾರೆ.

ಈ ರಸ್ತೆಯಲ್ಲಿ ನೀರು ಹೊರ ಹೊಗದೆ ಬೆಳಿಗ್ಗೆವರೆಗೂ ಸುಮಾರು 2 ಅಡಿವರೆಗೆ ನೀರು ನಿಂತಿದ್ದು, ಬೆಳಿಗ್ಗೆ ಕೆಲಸಗಳಿಗೆ ತೆರಳುವ ಉದ್ಯೋಗಿಗಳು ಪರದಾಡಬೇಕಾಯಿತು. ರಾತ್ರಿ ಸುರಿದ ಮಳೆಗೆ ಸದಾಶಿವನಗರದ ವಿದ್ಯುತ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು ಆ ಪ್ರದೇಶಗಳಲ್ಲಿ ರಾತ್ರಿ ಇಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಹೊಸಕೆರೆಹಳ್ಳಿಯಲ್ಲಿ ಮೋರಿಗಳಲ್ಲಿನ ಹೂಳು ತೆಗೆಯದೇ ಇದ್ದುದರಿಂದ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರು ಪರದಾಡಬೇಕಾಯಿತು. ಸುಮನಹಳ್ಳಿ, ಮೇಲು ಸೇತುವೆ ಬಳಿ ರಾಜಕಾಲುವೆಯಲ್ಲಿ ನೀರು ತುಂಬಿ ಧಾರಾಕಾರವಾಗಿ ಹರಿಯಲಾರಂಭಿಸಿದೆ.

ನಾಗರಬಾವಿ ವೃತ್ತದ ಬಳಿಯಿರುವ ಮೇಲು ಸೇತುವೆ ನೀರು ಕೆಳಗೆ ಹರಿದು ರಸ್ತೆಯ ತುಂಬೆಲ್ಲಾ ನೀರು ತುಂಬಿ ವಾಹನ ಸವಾರರು ಹೈರಾಣಾಗಿದ್ದರು. ಮೈಸೂರು ರಸ್ತೆಯ ಮೇಲು ಸೇತುವೆಯಲ್ಲಿ ಮಳೆ ನೀರು ನಿಂತು ನದಿಯಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟದ ಗ್ರೀನ್ ವುಡ್ ಶಾಲೆಯ ಮೈದಾನದಲ್ಲಿ ಮಳೆ ನೀರು ನಿಂತಿದ್ದು ಶಾಲೆಗೆ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವಕ್ಕಾದರು. ನಂತರ ನೀರು ತೆರವುಗೊಳಿಸಿದ ಬಳಿಕವೇ ಶಾಲೆಗಳು ಆರಂಭಗೊಂಡವು. ಬನ್ನೇರುಘಟ್ಟದ ಹಯಗಿರಿ ಅಪಾರ್ಟ್ ಮೆಂಟ್ ನ ಕಾಂಪೌಂಡ್  ಬೆಳಿಗ್ಗೆ ದಿಢೀರ್ ಕುಸಿದಿದೆ. ಆದರೆ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಜಯನಗರ 4ನೇ ಬ್ಲಾಕ್ ನಲ್ಲಿ ರಸ್ತೆ ಸಂಪೂರ್ಣ ಜಲಾವೃತ ಬಗ್ಗೆ ವರದಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Bengaluru Rain ಪ್ರತ್ಯಕ್ಷ ವರದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ