ಸಿದ್ದರಾಮಯ್ಯನವರೇಕೆ ಸರ್ಕಾರ ಅಸ್ಥಿರಗೊಳಿಸುತ್ತಾರೆ: ಹೆಚ್.ವಿಶ್ವನಾಥ್

#H.Vishwanath  #Siddaramaiah #Coalition Government

24-09-2018

ಚಿತ್ರದುರ್ಗ: ‘ರಾಷ್ಟ್ರೀಯ ಪಕ್ಷದಿಂದ ಸಾಲಮನ್ನಾದಂತಹ ತೀರ್ಮಾನ ಅಸಾಧ್ಯ, ಪ್ರಾದೇಶಿಕ ಪಕ್ಷವಾದ್ದರಿಂದ ಜನರ ಸಮಸ್ಯೆ ಆಲಿಸಿ ಸಾಲಮನ್ನಾ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ವಿಶ್ವನಾಥ್ ತಮ್ಮ ಸರ್ಕಾರದ ಕಾರ್ಯವನ್ನ ಸಮರ್ಥಿಸಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ತುಂಬಾ ಇದೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್‌ ಮುಖ ನೋಡಬೇಕಾಗುತ್ತದೆ' ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

'ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಆಡಳಿತದ ಸಮ್ಮಿಶ್ರ ಸರ್ಕಾರದಲ್ಲಿ ಸಾಲಮನ್ನಾ ವಿಚಾರವಾಗಿ ರಾಜಕೀಯ ಗೊಂದಲಗಳು ಇದ್ದದ್ದು ನಿಜ. ಈಗ ರಾಜಕೀಯ ಗೊಂದಲಗಳ ಮೋಡ ಸರಿದಿದೆ. ಆದರೆ ಬಿಜೆಪಿ ರಾಜಕೀಯ ಗೊಂದಲ‌‌ ಸೃಷ್ಟಿಸಿದೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತಾರೆ, ಈ ಹಿಂದೆ ಬಿಜೆಪಿಯವರು ಅಪವಿತ್ರ ಮೈತ್ರಿ ಮಾಡಿಕೊಂಡಿಲ್ಲವೇ'? ಎಂದು ಪ್ರಶ್ನಿಸಿದ್ದಾರೆ.

'ಬಿಜೆಪಿ ವಿರೋಧ ಪಕ್ಷವಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ. ಪ್ರವಾಹ ಪೀಡಿತ ಕೊಡಗಿಗೆ ಬಿಜೆಪಿಯವರು ಯಾಕೆ ಹೋಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಸುಳ್ಳಿನ ಸೃಷ್ಟಿಕರ್ತರು. ಕೆಲವು ಮಾಧ್ಯಮದವರು ಅದನ್ನೇ ದೊಡ್ಡದಾಗಿಸುತ್ತಿದ್ದಾರೆ' ಎಂದು ಕೆಲ ಮಾಧ್ಯಮಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಶಾಸಕ ಸುಧಾಕರ್, ನಾಗರಾಜ್ ಎಲ್ಲೂ ಹೋಗಿಲ್ಲ. ಬಿಜೆಪಿ ಅಧಿಕಾರಕ್ಕಾಗಿ ಅರ್ಜೆಂಟಲ್ಲಿದೆ. ಲೋಕಸಭೆ ಚುನಾವಣೆಯೊಳಗೆ ಸರ್ಕಾರ ಪತನಕ್ಕೆ ತಂತ್ರ ಹೆಣೆಯುತ್ತಿದೆ' ಎಂದು ಆರೋಪಿಸಿದ್ದಾರೆ.

'ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರು, ಅವರೇಕೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹೋಗುತ್ತಾರೆ? ಅದು ಅಸಾಧ್ಯ ಎಂದರು. ಕಾಂಗ್ರೆಸ್-ಜೆಡಿಎಸ್ ಅಧ್ಯಕ್ಷರು ಸಮಿತಿಯಲ್ಲಿದ್ದರೆ ಮಾತ್ರ ಸಮನ್ವಯ ಸಮಿತಿ ಪರಿಪೂರ್ಣವಾಗುತ್ತದೆ. ಆದರೂ ಎರಡೂ ಪಕ್ಷದ ಅಧ್ಯಕ್ಷರು ಸಮಿತಿಯಲ್ಲಿ ಇಲ್ಲ‌ದಿದ್ದರೆ ಏನಂತೆ? ಒಬ್ಬೊಬ್ಬರ ಜಾಯಮಾನ ಒಂದೊಂದು ಥರ ಇರುತ್ತದೆ, ಸಿದ್ದರಾಮಯ್ಯ ಸಿದ್ದರಾಮಯ್ಯನೇ, ವಿಶ್ವನಾಥ್‌ ವಿಶ್ವನಾಥನೇ ಎಂದರು.


ಸಂಬಂಧಿತ ಟ್ಯಾಗ್ಗಳು

H.Vishwanath Siddaramaiah ಪರಿಪೂರ್ಣ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ