ಅನುಮೋದಿತ ಕ್ರಿಯಾ ಯೋಜನೆಗಳನ್ನು ಸಂಪೂರ್ಣವಾಗಿ ಸಕಾಲದಲ್ಲಿ ಜಾರಿಗೊಳಿಸಿ ! 

Kannada News

02-06-2017

ಬೆಂಗಳೂರು:- 2017-18 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪ ಯೋಜನೆಯಡಿ ಅನುಮೋದಿತವಾಗಿರುವ ಕ್ರಿಯಾ ಯೋಜನೆಗಳನ್ನು ಸಂಪೂರ್ಣವಾಗಿ ಹಾಗೂ ಸಕಾಲದಲ್ಲಿ ಜಾರಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕರ್ನಾಟಕ ಅನುಸೂಚಿತ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ( ಹಣಕಾಸು ಸಂಪನ್ಮೂಲಗಳ ಯೋಜನೆ, ಹಂಚಿಕೆ ಹಾಗೂ ಉಪಯುಕ್ತತೆ ) ಅಧಿನಿಯಮ-2013 ರಂತೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಚಿಸಿರುವ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಜನ ಸಮುದಾಯದ  ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯ ವಿವರಗಳನ್ನು ರಾಜ್ಯ ಅಭಿವೃದ್ಧಿ ಪರಿಷತ್ ಸಮಗ್ರವಾಗಿ ಪರಿಶೀಲಿಸಿ ಅನುಮೋದನೆ ನೀಡುತ್ತದೆ. ಆದಕಾರಣ, ಅನುಮೋದಿತ ಕ್ರಿಯಾ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವಂತಿಲ್ಲ. ಅಲ್ಲದೆ ಈ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವೂ ಆಗಕೂಡದು ಎಂದು  ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಅಂತೆಯೇ, 2015-16 ನೇ ಸಾಲಿನ ಉಳಿಕೆ 751 ಕೋಟಿ ರೂ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ಒಟ್ಟು 27,703 ಕೋಟಿ ರೂ ಅನುದಾನವು ಲಭ್ಯವಿದೆ. ಅದೇ ರೀತಿ, 2016-17 ನೇ ಸಾಲಿನಲ್ಲಿ 1,782 ಕೋಟಿ ರೂ ವೆಚ್ಚವಾಗದೆಯೇ ಮುಂದಿನ ವರ್ಷಕ್ಕೆ ವರ್ಗಾವಣೆಯಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಅಗತ್ಯ ಅನುದಾನವನ್ನು ಒದಗಿಸಿದರೂ ಸಕಾಲದಲ್ಲಿ ವೆಚ್ಚ ಮಾಡದೆ ಕಾರ್ಯಾನುಷ್ಠಾನ ಮಾಡದ ಅಧಿಕಾರಿಗಳ ಧೋರಣೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ. ಎಲ್ಲಾ ಯೋಜನೆಗಳನ್ನೂ ಮಾರ್ಚ್ ಒಳಗೆ ಕಡ್ಡಾಯವಾಗಿ ಹಾಗೂ ಕರಾರುವಕ್ಕಾಗಿ ಅನುಷ್ಠಾನಗೊಳಿಸಿ ಶೇಕಡಾ ನೂರಕ್ಕೆ ನೂರು ಸಾಧನೆ ಮಾಡಲೇ ಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು  ಮುಖ್ಯಮಂತ್ರಿ ಎಚ್ಚರಿಸಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ,  ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಸಚಿವ ಟಿ. ಬಿ. ಜಯಚಂದ್ರ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸತ್ ಸದಸ್ಯ ಆರ್. ಧೃವನಾರಾಯಣ್,  ಶಾಸಕರಾದ ಕೆ. ಎನ್. ರಾಜಣ್ಣ ಹಾಗೂ ಡಾ ಉಮೇಶ್ ಜಾಧವ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ, ಅಭಿವೃದ್ಧಿ ಆಯುಕ್ತರೂ ಹಾಗೂ ಕೃಷಿ ಉತ್ಪನ್ನ ಟಿ. ಎಂ. ವಿಜಯ ಭಾಸ್ಕರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್. ಕೆ. ಅತೀಕ್ ಹಾಗೂ ತುಷಾರ್ ಗಿರಿನಾಥ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಹಾಗೂ ನಿಗಮ-ಮಂಡಳಿಗಳ ಕಾರ್ಯ ನಿರ್ವಾಹಕ ನಿರ್ದೇಶಕರು ಮಹತ್ವಯುತ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪರಿಷತ್‍ನ ಈ ಸಭೆಯಲ್ಲಿ ವಿವಿಧ ಇಲಾಖೆಗಳು ಸಲ್ಲಿಸಿರುವ 2017-18 ನೇ ಸಾಲಿನ  ಕ್ರಿಯಾ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆದು, ಹಲವು ಯೋಜನೆಗಳಿಗೆ ಅನುಮೋದನೆ ದೊರೆಯಿತು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ