ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ?

#JDS #Legislative Party #Hassan #H.D.Kumaraswamy

21-09-2018

ಬೆಂಗಳೂರು: ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯನ್ನು ಶನಿವಾರ ಕರೆದಿದ್ದಾರೆ. 

ಜೆಡಿಎಸ್‍ನ ಭದ್ರ ಕೋಟೆ ಹಾಸನದಲ್ಲಿ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ ಬೆಳಿಗ್ಗೆ ಶೃಂಗೇರಿಗೆ ಭೇಟಿ ನೀಡಲಿರುವ ಕುಮಾರಸ್ವಾಮಿ, ನಂತರ ಅತಿವೃಷ್ಠಿಯಿಂದ ಹಾನಿಯಾಗಿರುವ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದಾರೆ. ಬಳಿಕ ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ವಿಧಾನ ಪರಿಷತ್ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ, ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡುವುದು, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಈಗಾಗಲೇ ಜೆಡಿಎಸ್ ಆರೋಪಿಸಿದೆ. ಜೆಡಿಎಸ್‍ನ ಎಲ್ಲಾ ಶಾಸಕರು ಒಗ್ಗಟ್ಟಿನಿಂದಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಆಪರೇಷನ್ ಕಮಲಕ್ಕೆ ಒಳಗಾಗಬಾರದು. ಒಂದು ವೇಳೆ ಬಿಜೆಪಿಯವರು ಸಂಪರ್ಕ ಮಾಡಿದರೂ ಮಣಿಯದೆ ವರಿಷ್ಠರ ಗಮನಕ್ಕೆ ತರುವಂತೆ ಎಲ್ಲಾ ಶಾಸಕರಿಗೆ ಸಭೆಯಲ್ಲಿ ಸಲಹೆ ಮಾಡುವ ಸಾಧ್ಯತೆಗಳಿವೆ. ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸರ್ಕಾರ ಉಳಿಸಿಕೊಂಡು ಮುನ್ನಡೆಸುವ ಕಡೆ ಗಮನ ಹರಿಸಬೇಕು.

ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆ ಕಡೆ ಹೆಚ್ಚಿನ ಗಮನಹರಿಸಬೇಕು. ಹೆಚ್ಚು ಸ್ಥಾನ ಗೆಲ್ಲಲು ಅನುಕೂಲವಾಗುವಂತೆ ಈಗಿನಿಂದಲೇ ತಯಾರಿ ನಡೆಸಬೇಕು. ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ವಿರೋಧ ಪಕ್ಷವಾದ ಬಿಜೆಪಿ ಅಧಿಕಾರ ಗಳಿಸಲು ಪರೋಕ್ಷ ಮಾರ್ಗವನ್ನು ಅನುಸರಿಸುತ್ತಿದ್ದು, ಮೈತ್ರಿ ಸರ್ಕಾರದ ಅಭಿವೃದ್ಧಿಗೆ ಹಿನ್ನಡೆಯಾಗುವಂತೆ ಆಗಾಗ್ಗೆ ಅಡ್ಡಿಪಡಿಸುವ ಕಾರ್ಯಗಳನ್ನು ನಡೆಯುತ್ತಿರುತ್ತದೆ. ಬಿಜೆಪಿಯಿಂದಾಗುವ ರಾಜಕೀಯ ಗೊಂದಲ ಹಾಗೂ ಮಿತ್ರ ಪಕ್ಷವಾದ ಕಾಂಗ್ರೆಸ್ ನಲ್ಲಿನ ಆಂತರಿಕ ಅಸಮಾಧಾನಗಳ ಬಗ್ಗೆ ಶಾಸಕರು ಹೆಚ್ಚು ಗಮನ ಹರಿಸಬೇಕಿಲ್ಲ. ತಮ್ಮ ತಮ್ಮ  ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತೊಂದರೆಗಳು ಉಂಟಾಗಿದ್ದರೆ, ವರಿಷ್ಠರ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಲಾಗುವುದು. ಯಾವುದೇ ಶಾಸಕರನ್ನು ಸರ್ಕಾರದಲ್ಲಿ ಕಡೆಗಣಿಸುವುದಿಲ್ಲ. ಮೈತ್ರಿ ಸರ್ಕಾರವಾಗಿರುವುದರಿಂದ ವಿಳಂಬವಾಗಿರಬಹುದಷ್ಟೇ. ಪಕ್ಷದಲ್ಲಿನ ಅಸಮಾಧಾನ, ಭಿನ್ನಾಭಿಪ್ರಾಯಗಳೇ ಬಿಜೆಪಿಗೆ ಅಸ್ತ್ರವಾಗಲು ಅವಕಾಶ ಮಾಡಿಕೊಡಬಾರದು. ಯಾವುದೇ ಕಾರಣಕ್ಕೂ ಬಿಜೆಪಿಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಅವಕಾಶ ಮಾಡಿಕೊಡದಂತೆ ಒಗ್ಗಟ್ಟಿನಿಂದ ಇರಬೇಕು ಎಂಬ ಸಲಹೆ ಶಾಸಕಾಂಗ ಪಕ್ಷದಲ್ಲಿ ಮಾಡುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

JDS Legislative Part H.D.Kumaraswamy ಕ್ಷೇತ್ರ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ