‘ಸಿಎಂ ರಾಜಕೀಯ ಜ್ಞಾನ ಪುಸ್ತಕ ಓದಿಕೊಳ್ಳಬೇಕು’

#R.Ashoka #Shobha Karandlaje #N. Ravikumar #

21-09-2018

ಬೆಂಗಳೂರು: ರಾಜ್ಯದ ಜನ ದಂಗೆ ಎದ್ದೇಳಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ಹಾಗೂ ಯಡಿಯೂರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್,ರಾಜ್ಯದ ‘ಮುಖ್ಯಮಂತ್ರಿ ಈಡೀ ರಾಜ್ಯದ ಜನ ದಂಗೆ ಎದ್ದೇಳಿ ಎಂದಿದ್ದಾರೆ. ಇಲ್ಲಿಯವರೆಗೆ ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಈ ರೀತಿಯ ಹೇಳಿಕೆ ನೀಡಿರಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಮಾಡಿ ಈಗ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿಯ ವರ್ತನೆ ಮಾಡುವುದು ಸರಿಯಲ್ಲ. ಯಾರೂ ಅಧಿಕಾರ ನಡೆಸಲು ಅವಕಾಶ ಕೊಟ್ಟರೋ ಅವರೇ ತಿರುಗಿಬಿದ್ದಾರೆ. ಸರ್ಕಾರಕ್ಕೆ ದಿಕ್ಕು ದೆಸೆಯಿಲ್ಲ. ಯಾವಾಗ ಸರ್ಕಾರ ಬಿಳುತ್ತದೆ ಎಂದು ಜನ ಕಾಯುತ್ತಿದ್ದಾರೆ, ಮಂತ್ರಿ ಮೇಲೂ ಕ್ರಮ ಇಲ್ಲ. ಕಾಂಗ್ರೆಸ್ ಶಾಸಕರು ಸರ್ಕಾರ ತೊಲಗಲಿ ಎನ್ನುತ್ತಾರೆ. ಇನ್ನೂ ಎರಡು ಮೂರು ದಿನದಲ್ಲಿ ಸರ್ಕಾರ ಬಿಳುತ್ತದೆ ಎನ್ನುವ ಆತಂಕದಲ್ಲಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮಾತನಾಡಿ, ಇವತ್ತು ಪ್ರತಿಭಟನೆ ಮಾಡುವ ಸಂದರ್ಭ ಯಾಕೆ ನಿರ್ಮಾಣವಾಯಿತು, 104ಸ್ಥಾನ ಗೆದ್ದ ಬಿಜೆಪಿ ಅಧಿಕಾರ ಪಡೆಯದೆ ಕೇವಲ 37 ಸ್ಥಾನ ಪಡೆದವರು ಅಧಿಕಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗ ಸರ್ಕಾರ ಮುಳುಗುತ್ತೆ ಎನ್ನುವ ಸಮಯಕ್ಕೆ ತಾಳ್ಮೆ ಕಳೆದುಕೊಂಡು ದಂಗೆ ಮುಖ್ಯಮಂತ್ರಿ ದಂಗೆ ಏಳಿ ಎಂದು ಹೇಳುತ್ತಿದ್ದಾರೆ ಎಂದ ಅವರು, ರೈತರ ಸಾಲಮನ್ನಾ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಶಿಷ್ಯವೇತನ ನಿಡಿಲ್ಲ. ಬಿಬಿಎಂಪಿ ನೌಕರರ ಕೂಲಿ ಕೊಟ್ಟಿಲ್ಲ. ಉಪನ್ಯಾಸಕರ ವೆತನ ನೀಡಿಲ್ಲ ಎಂದು ಆರೋಪಿಸಿದರು.

ಸರ್ಕಾರದ ನೂರು ದಿನದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ. ಊರಿಗೆ ಊರುಕೊಚ್ಚಿಕೊಂಡು ಹೋದರೂ ಏನೂ ಮಾಡಿಲ್ಲ. ಪದೇ ಪದೇ ದೇವಸ್ಥಾನ ತಿರುಗುತ್ತಿರಿ. ಶಾಸಕರ ನಿಧಿ ಬಂದಿಲ್ಲ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಜ್ಞಾನ ಪುಸ್ತಕ ಓದಿಕೊಳ್ಳಬೇಕು. ದಂಗೆ ಪದದ ಬಗ್ಗೆ ನಿಗಂಟು ಓದಿ, ಹೊಸನಿಘಂಟು ಬರೆಯಲು ಹೋಗಿದ್ದಿರಾ, ಯಡಿಯೂರಪ್ಪ ಅವರ ವಿರುದ್ಧ ಏಕೆ ದಂಗೆ ಏಳಬೇಕು ಹೇಳಿ? ಎಂದು ಪ್ರಶ್ನೆ ಮಾಡಿದರು.

ಮಾಜಿ ಸಚಿವ ಸೋಮಶೇಖರ್ ಮಾತನಾಡಿ, ದಂಗೆ ಎನ್ನುವ ಶಬ್ದ ಸಂವಿಧಾನ ಬಾಹಿರವಾಗಿದೆ. ಹೀಗಾಗಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲು ಮಾಡಬೇಕು. ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಅಪಾರ ಮೌಲ್ಯದ ಆಸ್ತಿ ಸಂಪಾದನೆ ಮಾಡಿದ್ದಾರೆ. ಆದರೆ, ಹೊಂದಾಣಿಕೆ ಮತ್ತು ಜಾತಿ ರಾಜಕೀಯ ಮಾಡಿ, ಜೈಲಿನಿಂದ ಪಾರಾಗಲು ಸಾಧ್ಯವಾಯಿತು ಎಂದ ಅವರು, ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಬೆಂಬಲಿಸಬಾರದು ಎಂದು ಹೇಳಿದರು.

ಮೈಸೂರು ಬ್ಯಾಂಕ್ ವೃತ್ತದ ವ್ಯಾಪ್ತಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎರಡು ಕೆಎಸ್‍ಆರ್ ಪಿ ತುಕಡಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್, ಬಿಜೆಪಿಯ ಕಾರ್ಯದರ್ಶಿ ಜಯದೇವ, ಬೆಂಗಳೂರು ಬಿಜೆಪಿ ಅಧ್ಯಕ್ಷ ಸದಾಶಿವ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಪ್ರಮುಖರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ