‘ಬಿಜೆಪಿಯ ಬುಡ ಕಳಚಿ ತುದಿಯೂ ಮುರಿದು ಬೀಳಲಿದೆ’

#Eshwara Khandre #Cabinet #Democracy

20-09-2018

ಬೆಂಗಳೂರು: ಇನ್ನಾರು ತಿಂಗಳಲ್ಲಿ ಚುನಾವಣೆ ಬರಲಿದೆ. ಆಗ ಬಿಜೆಪಿಯ ಬುಡವೂ ಕಳಚುತ್ತದೆ. ತುದಿಯೂ ಮುರಿದು ಬೀಳಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಿಜೆಪಿ ಅನಗತ್ಯವಾಗಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ತಲೆ ತೂರಿಸುತ್ತಿದೆ. ಅವರ ಆಶಯ ಈಡೇರುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ವಿರುದ್ಧ ಫಲಿತಾಂಶ ಬರುವ ಮೂಲಕ ಎಲ್ಲವೂ ಮುಗಿಯಲಿದೆ ಎಂದು ಹೇಳಿದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಮಿಲಿಟರಿ ತಂದು ನಮ್ಮ ಶಾಸಕರನ್ನು ಎತ್ತಾಕಿಕೊಂಡು ಹೋಗಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಸರ್ವಾಧಿಕಾರ ವ್ಯವಸ್ಥೆ ಇಲ್ಲ. ಬಿಜೆಪಿ ನಾಯಕರು ಯಾವುದೇ ರೀತಿಯ ಆಮಿಷ ಒಡ್ಡಿದರು ಕಾಂಗ್ರೆಸ್ ನ ಯಾವೊಬ್ಬ ಶಾಸಕರು ಪಕ್ಷ ಬಿಟ್ಟು ತೆರಳುವುದಿಲ್ಲ. ಕಳೆದೊಂದು ತಿಂಗಳಿಂದ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದಿರುವ ಹುನ್ನಾರ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಡಳಿತ ಬಿಡಬೇಕು ಎನ್ನುವ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ. ಆಡಳಿತದಲ್ಲಿ ಏರುಪೇರು ಉಂಟಾದರೆ ಜನಪರ ಕೆಲಸಗಳು ನಡೆಯುವುದಿಲ್ಲ ಆಡಳಿತ ಸುಗಮವಾಗಿ ಸಾಗುವುದಿಲ್ಲ ಎಂಬುದನ್ನು ಅರಿತಿರುವ ಬಿಜೆಪಿಯವರು ಈ ಕಾರ್ಯ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ಯಾರು ಏನೇ ಪ್ರಯತ್ನ ಮಾಡಿದರೂ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. ಇದು ಬಂಡೆಯಂತೆ ಇದೆ. ಸರ್ಕಾರ ಸ್ಥಿರ ಮತ್ತು  ಭದ್ರವಾಗಿದೆ. ಬಿಜೆಪಿಯವರು ಅಪ ಪ್ರಚಾರದ ಮೂಲಕ ಆಡಳಿತ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಜನರಿಗೆ ಜನಪರ ಕಾರ್ಯ ಮುಟ್ಟಬಾರದು. ಸರ್ಕಾರದ ಬಗ್ಗೆ ಜನರಿಗೆ ಬೇಸರ ಮಾಡಬೇಕು. ಇವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ ಯಾವ ಕೆಲಸವೂ ನಿಂತಿಲ್ಲ. ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬುದು ಹಲವರ ಬಯಕೆಯಾಗಿದೆ. ಇರುವ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಹೊಸ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುವುದು ಸರಿಯಲ್ಲ. ಆಡಳಿತಾತ್ಮಕ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಕೆಲ ಸಮಯ ಹಿಡಿಯುತ್ತದೆ. ಸರ್ಕಾರ ಆದಷ್ಟು ತ್ವರಿತವಾಗಿ ಸಮಸ್ಯೆ ನಿವಾರಿಸಲಿದೆ ಎಂದರು.

ನಮ್ಮ ಜಿಲ್ಲೆಯ ಶಾಸಕರ ಜೊತೆ ದಿನನಿತ್ಯ ಸಂಪರ್ಕದಲ್ಲಿದ್ದೇನೆ. ಇದೀಗ ತಾನೇ ಶಾಸಕ ರಹೀಂ ಖಾನ್ ಜೊತೆ ಮಾತುಕತೆ ನಡೆಸಿದ್ದೇನೆ. ನನ್ನ ಬಗ್ಗೆ ಕೇಳಿ ಬರುತ್ತಿರುವ ಮಾತು ವದಂತಿ ಸುಳ್ಳು ಎಂದು ಹೇಳಿದ್ದಾರೆ. ಕುಟುಂಬ ಸದಸ್ಯರ ಜೊತೆ ಆತ್ಮೀಯರ ಜೊತೆ ಪ್ರವಾಸಕ್ಕೆ ಹೋಗುವುದು ತಪ್ಪಲ್ಲ. ಇದೇ ರೀತಿ ನಮ್ಮ ಶಾಸಕರು ಮತ್ತು ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುವ ಮಾತನಾಡಿರಬಹುದು ಎಂದರು.

ಕ್ಯಾಬಿನೆಟ್ ಮುಂದಕ್ಕೆ ಹೋಗಿದ್ದಕ್ಕೆ ಕೆಲವರಿಗೆ ಬೇಸರ ಇರಬಹುದು. ಮಂತ್ರಿಯಾಗಿ ಕೆಲಸ ಮಾಡುವ ಆಸೆಯನ್ನು ಮಹತ್ವಾಕಾಂಕ್ಷೆಯನ್ನು ಹೊಂದಿದ್ದರೆ ಅಂಥವರಿಗೆ ನಿರಾಸೆಯಾಗಿದೆ. ಹಾಗಂತ ಅವರು ಪಕ್ಷವನ್ನು ಬಿಟ್ಟು ಬೇರೆ ಕಡೆ ಹೋಗುವ ನಿರ್ಧಾರ ಕೈಗೊಂಡಿಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಬೇಸರ ಇದ್ದೇ ಇದೆ. ಅದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ ಎಂದರು.

ಒಂದು ಲಕ್ಷ ಮೆಟ್ರಿಕ್ ಟನ್ ಹೆಸರುಕಾಳು ಖರೀದಿ ಮಾಡುವ ಕಾರ್ಯಕ್ಕೆ ಇರುವ ಮಿತಿಯನ್ನು ತೆಗೆದುಹಾಕಬೇಕು. ಇಲ್ಲವಾದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಲಿದೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಆದರೆ, ಕೇಂದ್ರ ಸರ್ಕಾರದ ನೀತಿ ಎಲ್ಲಕ್ಕೂ ತಡೆಯಾಗಿದೆ. ಇದರಿಂದ ಸರ್ಕಾರ ಹೆಸರುಕಾಳು ಖರೀದಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾತ್ರ ಮಾಡಿದೆ. ಇದಕ್ಕೆ ಕನಿಷ್ಠ ಬೆಂಬಲ ಬೆಲೆ ಸೂಕ್ತ ಉದಾಹರಣೆ. 2018-19ರಲ್ಲಿ ಹೆಸರುಕಾಳಿನ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 5575  ರೂ. ನಿಂದ 6975 ರೂಗೆ ಹೆಚ್ಚಿಸಿದರು. ರೈತರು ಬೆಳೆದ ಬೆಳೆಯನ್ನು ಕೇಂದ್ರ ಸರ್ಕಾರ ಖರೀದಿಸಬೇಕಿತ್ತು. ಆದರೆ ಆ ಕಾರ್ಯವನ್ನ ಮಾಡುತ್ತಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Cabinet Eshwara Khandre KPCC Democracy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ