ವಿಮಾನದಲ್ಲಿ ಸುತ್ತಾಡಿ ಮೋಜು ಮಾಡಲು ಕಳ್ಳತನ ಮಾಡುತ್ತಿದ್ದವನ ಬಂಧನ !

Kannada News

02-06-2017 221

ಬೆಂಗಳೂರು:- ದೆಹಲಿ , ಹೈದರಾಬಾದ್,  ಗೋವಾ ಇನ್ನಿತರ ಕಡೆಗಳಿಗೆ ವಿಮಾನದಲ್ಲಿ ಸುತ್ತಾಡಿ ಮೋಜು ಮಾಡಲು ಹಗಲಿನಲ್ಲಿಯೇ ಮನೆಗಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರಿನ ಮರಳೂರು ಮೂಲದ ಸೈಯ್ಯದ್ ಅಹ್ಮದ್ ಆಲಿಯಾಸ್ ಸೈಯ್ಯದ್ (32) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 1 ಕೆಜಿ 134 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ, ಬಜಾಜ್ ಅವೇಂಜರ್ ಬೈಕ್, 20 ಸಾವಿರ ನಗದು ಸೇರಿ 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಅವರು ತಿಳಿಸಿದ್ದಾರೆ. ಆರೋಪಿಯು ಕೆಂಗೇರಿಯ ಚಿಕ್ಕಬಸ್ತಿಯಲ್ಲಿ ಮನೆ ಮಾಡಿಕೊಂಡು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ವಿಮಾನದಲ್ಲಿ ಸುತ್ತಾಡಿ ಮೋಜು ಮಾಡಲು ಹಗಲಿನ ವೇಳೆಯೇ ಮನೆಗಳ್ಳತನಕ್ಕೆ ಇಳಿದಿದ್ದ. ಮಾದನಾಯಕನಹಳ್ಳಿ, ಸುಬ್ರಹ್ಮಣ್ಯಪುರ, ಬ್ಯಾಟರಾಯನಪುರಗಳಲ್ಲಿ ಆರೋಪಿಯು ಮನೆಗಳ್ಳತನ ಮಾಡಿರುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಕಳವು ಮಾಡಿದ ಹಣದಿಂದ ದೆಹಲಿ, ಹೈದರಾಬಾದ್, ಗೋವಾ ಇನ್ನಿತರ ಕಡೆಗಳಿಗೆ ವಿಮಾನದಲ್ಲಿ ಹೋಗಿ ಮೋಜು ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ ಆರೋಪಿಯು ಹಿಂದೆ ಕೂಡ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದು, ಹಗಲಿನ ವೇಳೆ ಮನೆಕಳ್ಳತನ ಮಾಡುವಲ್ಲಿ ಚಾಣಾಕ್ಷನಾಗಿದ್ದನು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ. ನೆಲಮಂಗಲ ಉಪ ವಿಭಾಗದ ವಿಶೇಷ ಪೊಲೀಸ್ ತಂಡ ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ