ಮೈತ್ರಿ ಸರ್ಕಾರಕ್ಕೆ ದಲಿತ ಸಂಘಟನೆಗಳ ಎಚ್ಚರಿಕೆ!

#A.J.Sadashiva commission #Reservation #Report

18-09-2018

ಬೆಂಗಳೂರು: ದಲಿತ ಸಮುದಾಯದಲ್ಲಿ ಒಳ ಮೀಸಲಾತಿ ಕಲ್ಪಿಸುವಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ನವೆಂಬರ್ ಅಂತ್ಯದೊಳಗಾಗಿ ಜಾರಿಗೆ ತರುವಂತೆ ದಲಿತ ಸಂಘಟನೆಗಳು ಮೈತ್ರಿ ಸರ್ಕಾರವನ್ನು ಒತ್ತಾಯಿಸಿವೆ. ಗಡುವಿನೊಳಗೆ ಆಯೋಗದ ವರದಿ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಸಮನ್ವಯ ಸಮಿತಿಯಡಿ 23ಕ್ಕೂ ಹೆಚ್ಚು ದಲಿತಪರ ಸಂಘಟನೆಗಳ ಮುಖಂಡರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ್ದು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಪ್ರಣಾಳಿಕೆಯಲ್ಲಿ ಆಯೋಗದ ವರದಿಯನ್ನು ಆರು ತಿಂಗಳಲ್ಲಿ ಜಾರಿಗೆ ತರುವುದಾಗಿ ಹೇಳಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದೆ. ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಈ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮಾದಾರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಜೆ.ಡಿ.ಎಸ್.ಉಪಾಧ್ಯಕ್ಷ ಕೆ.ಎ.ಅನಂದ್ ಮಾತನಾಡಿ, ನವೆಂಬರ್ 30ರ ಒಳಗಾಗಿ ವರದಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ವರದಿ ಜಾರಿಗೆ ತರದಿದ್ದರೆ ಮುಂದಿನ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕರ್ನಾಟಕ ಬಂದ್, ದೆಹಲಿ ಚಲೋ ಸೇರಿದಂತೆ ಹಲವು ರೀತಿಯ ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಾದಿಗ ದಂಡೋರ ಸೇರಿ ಎಲ್ಲಾ ಸಂಘಟನೆಗಳು ಸೇರಿ ಹೋರಾಟ ನಡೆಸುತ್ತೇವೆ. ಸಕಾರಾತ್ಮಕವಾದ ನಿರ್ಧಾರ ತೆಗೆದುಕೊಂಡರೆ ಹಬ್ಬ ಆಚರಿಸುತ್ತೇವೆ. ವ್ಯತಿರಿಕ್ತವಾದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಒಳ ಮೀಸಲಾತಿಗಾಗಿ 23 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಮಾದಿಗ ಸಮುದಾಯ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಅನ್ಯಾಯಕ್ಕೊಳಗಾಗಿದೆ. ಇದನ್ನು ಸರಿಪಡಿಸುವಂತೆ ಆಯೋಗ ಏಳು ವರ್ಷಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿ ದಲಿತ ಸಮುದಾಯವನ್ನು ದಾರಿ ತಪ್ಪಿಸಿದ್ದಾರೆ. ಈಗಿನ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ವಾಗ್ದಾನವನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮಾದಿಗ ಸಮುದಾಯವನ್ನು ಸಮಾಧಾನಪಡಿಸಲು ಆದಿ ಜಾಂಭವ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ನಿಗಮಕ್ಕೆ 500ಕೋಟಿ ರೂ. ಮೀಸಲಿಡಲಾಗಿದೆ. ಈ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ಈ ಮೊತ್ತವನ್ನು 1000 ಕೋಟಿ ರೂಗೆ ಏರಿಕೆ ಮಾಡಬೇಕು. ವಿವಿಧ ನಿಗಮ, ಮಂಡಗಳಿಗಳು, ರಾಜಕೀಯ ನೇಮಕಾತಿಗಳಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯತೆ ದೊರಕಿಸಿಕೊಡಬೇಕು ಎಂದು ಆನಂದ್ ಒತ್ತಾಯಿಸಿದರು.

ಕಳೆದ ಆರು ದಶಕಗಳ ರಾಜ್ಯದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಮೈತ್ರಿ ಸರ್ಕಾರದಲ್ಲಿ ಮಾದಿಗ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯೆ ನೀಡಿಲ್ಲ. ನಮ್ಮ ಸಮುದಾಯಕ್ಕೆ ಪರಮ ಅನ್ಯಾಯವಾಗಿದೆ. 101 ದಲಿತ ಜಾತಿಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೂಲ ಅಸ್ಪೃಶ್ಯ ಜನಾಂಗವಾದ ಮಾದಿಗ ಅಥವಾ ಮಾದರ್ ಜಾತಿಗೆ ಸೇರಿರುವ ನಮ್ಮ ಸಮುದಾಯಕ್ಕೆ ಈಗಲೂ ಶೋಷಣೆ ಮುಂದುವರೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

A.J.Sadashiva commis Reservation ಜನಾಂಗ ದಶಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ