ಸರಗಳ್ಳನಾಗಿದ್ದ ಗಂಡ ಆಯ್ತು...ಈಗ ಹೆಂಡತಿಯೂ ಅರೆಸ್ಟ್

#Chain snatch # wife # kengeri police

18-09-2018

ಬೆಂಗಳೂರು: ಪತಿಗೆ ಸರಗಳವು ಮಾಡಲು ಪ್ರೇರೇಪಿಸುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಅಲಿಯಾಸ್ ಗಣಿಯ ಪತ್ನಿ ಮಹಾದೇವಿಯನ್ನು ಕೊನೆಗೂ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಷರಾಮಿ ಜೀವನ ನಡೆಸಲು ಪತಿಯನ್ನು ಪ್ರೇರೇಪಿಸಿ 70ಕ್ಕೂ ಹೆಚ್ಚು ಕಡೆಗಳಲ್ಲಿ ಸರಗಳವು ಮಾಡಿಸಿ ಕುಖ್ಯಾತಿ ಹೊಂದಿದ್ದ ಮಹಾದೇವಿಯು ತಲೆಮರೆಸಿಕೊಂಡಿದ್ದು, ಸತತ ಕಾರ್ಯಾಚರಣೆ ನಡೆಸಿ ಕೆಂಗೇರಿ ಪೊಲೀಸರು ಸೆರೆಹಿಡಿದಿದ್ದಾರೆ.

ಸರಗಳ್ಳ ಅಚ್ಯುತ್ ಕುಮಾರ್ ನ ಎರಡನೇ ಪತ್ನಿಯಾಗಿದ್ದ ಬಂಧಿತ ಆರೋಪಿ ಮಹಾದೇವಿಯು 3 ತಿಂಗಳ ಹಿಂದೆ ಅಚ್ಯುತ್ ಕುಮಾರ್‍ ನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ ನಂತರ ಪರಾರಿಯಾಗಿ ಅನಾಥಾಶ್ರಮ ಸೇರಿದ್ದಳು. ಇದನ್ನು ಪತ್ತೆಹಚ್ಚಿದ ಕೆಂಗೇರಿ ಪೊಲೀಸರು ಮಹಾದೇವಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಮಹಾದೇವಿ ಐಷರಾಮಿ ಜೀವನಕ್ಕಾಗಿ ತನ್ನ ಮೊದಲ ಪತಿಗೆ ಕೈಕೊಟ್ಟು ನಂತರ ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಲ್ಲದೇ ದಿನಕ್ಕೆ ಕನಿಷ್ಟ 3-4 ಸರಗಳ್ಳತನ ಮಾಡುವಂತೆ ಪತಿ ಅಚ್ಯುತ್ ಕುಮಾರ್ ನನ್ನು ಒತ್ತಾಯಿಸಿದ್ದಳು. ಪತ್ನಿಯ ಮಾತಿನಂತೆ ಅಚ್ಯುತ್ ಕಳ್ಳತನ ಮಾಡುತ್ತಿದ್ದನು. ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ಮೌಲ್ಯದ ಸರಗಳ್ಳತನ ಮಾಡಿದ್ದನು. ಆದರೆ, ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಕೆಂಗೇರಿ ಪೊಲೀಸರು ಬಂಧಿಸಿದ್ದು ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ, ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17ರಂದು ಸರಗಳ್ಳ ಅಚ್ಯುತ್‍ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Chain snatch Husband-wife ಜಿಲ್ಲೆ ಆದರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ