ಬಿಜೆಪಿ ಮುಖಂಡ ಹರೀಶ್ ಅವರನ್ನು ಕೊಲೆಗೈದ ನಾಲ್ವರ ಬಂಧನ !

Kannada News

02-06-2017 545

ಬೆಂಗಳೂರು:- ನಗರದ ಹೊರವಲಯದ ಚಂದಾಪುರ ಬಳಿಯ ಹೀಲಲಿಗೆ ಬಳಿ ಆನೇಕಲ್ ತಾಲ್ಲೂಕಿನ ಬಿಜೆಪಿ ಎಸ್ಸಿ/ಎಸ್ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್ ಅವರನ್ನು ಕೊಲೆಗೈದ ನಾಲ್ವರನ್ನು ಸೂರ್ಯಸಿಟಿ ಪೊಲೀಸರು ಬಂಧಿಸಿದ್ದಾರೆ. ಹೀಲಲಿಗೆಯ ರಾಜು ಅಲಿಯಾಸ್ ರಾಜೇಶ (27), ಸಂದೀಪ್ (24), ಕಿಶೋರ್ (23), ಕಿರಣ್ (24) ಬಂಧಿತ ಆರೋಪಿಗಳಾಗಿದ್ದಾರೆ, ತಲೆಮರೆಸಿಕೊಂಡಿರುವ ಸುಭಾಷ್ ಹಾಗೂ ಕಾರ್ತಿಕ್‍ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಹರೀಶ್ ಕೊಲೆ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಮುತ್ಯಾಲಮಡುವಿನ ಬಳಿ ಆರೋಪಿಗಳು  ತಲೆಮರೆಸಿಕೊಂಡಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ರಾಜೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ನಂತರ ಉಳಿದ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ರಾಜೇಶ್, ಸಂದೀಪ್, ಕಿಶೋರ್ ಸೋದರ ಸಂಬಂಧಿಗಳಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಹೀಲಲಿಗೆಯ ಕೆರೆಗೆ ಹೆಚ್ಚಿನ ನೀರು ಬಂದಿದ್ದು, ರಾಜೇಶ್, ಸಂದೀಪ್, ಕಿಶೋರ್ ಮೀನು ಹಿಡಿಯಲು ಹೋಗಿದ್ದರು. ಅಲ್ಲಿಗೆ ಬಂದಿದ್ದ ಹರೀಶ್, ಕೆರೆ ನೀರಿನ ಟೆಂಡರ್ ನನ್ನ ಹೆಸರಿಗೆ ಬಂದಿದ್ದು, ಮೀನು ಹಿಡಿಯದಂತೆ ತಾಕೀತು ಮಾಡಿ ಹಲ್ಲೆ ನಡೆಸಿದ್ದನು. ಇದಲ್ಲದೆ ರಾಜೇಶ್, ಸಂದೀಪ್ ಅವರ ಮನೆಗೆ ಹೋಗಿ ತಂದೆ-ತಾಯಿಗಳ ಮೇಲೂ ಹಲ್ಲೆ ನಡೆಸಿದ್ದ. ಇದರಿಂದ ರೊಚ್ಚಿಗೆದ್ದು, ಆರೋಪಿಗಳು ಹರೀಶ್‍ನನ್ನು ಮೇ 31ರ ಮಧ್ಯರಾತ್ರಿ ಅಡ್ಡಗಟ್ಟಿ ಕೊಲೆ ಮಾಡಿದ್ದರು. ಹರೀಶ್ ಕೊಲೆ ಪ್ರಕರಣವೊಂದರಲ್ಲಿ ಹಿಂದೆ ಭಾಗಿಯಾಗಿದ್ದು, ಅವರ ಭಾವ ವೇಣುಗೋಪಾಲ್ ಚಂದಾಪುರ ಪುರಸಭೆ ಅಧ್ಯಕ್ಷರಾದ ನಂತರ ಹೀಲಲಿಗೆಯ ಸುತ್ತಮುತ್ತ ರಿಯಲ್ ಎಸ್ಟೇಟ್ ನಡೆಸಿಕೊಂಡಿದ್ದನು. ಆರೋಪಿಗಳನ್ನು ಡಿವೈಎಸ್ಪಿ ಎಸ್.ಪಿ ಉಮೇಶ್ ಅವರ ನೇತೃತ್ವದ ವಿಶೇಷ ತಂಡ ಬಂಧಿಸಿ ಉಳಿದವರಿಗಾಗಿ ಶೋಧ ನಡಸಿದೆ ಎಂದು  ಅಮಿತ್ ಸಿಂಗ್ ತಿಳಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ