ಪೆಟ್ರೋಲ್-ಡೀಸೆಲ್ ಮೇಲಿನ ಶುಲ್ಕ ಕಡಿತ: ಸಿಎಂ

#Petrol-diesel #H.D.Kumaraswamy #SGST

17-09-2018

ಕಲಬುರಗಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಸರ್ಕಾರದ ಶುಲ್ಕವನ್ನು ಇಂದು ಮಧ್ಯ ರಾತ್ರಿಯಿಂದ ಅನ್ವಯವಾಗುವಂತೆ 2 ರೂಪಾಯಿಯಷ್ಟು ಕಡಿಮೆಗೊಳಿಸಲಾಗಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಲಬುರಗಿಯಲ್ಲಿಂದು, ಹೈದರಾಬಾದ್-ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು. ಇಂಧನ ಬೆಲೆಯ ತೀವ್ರ ಏರಿಕೆಯಿಂದ ಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಹಿತದೃಷ್ಟಿಯಿಂದ, ಇಂಧನ ಬೆಲೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಜಾಗತಿಕ ತೈಲ ಬೆಲೆಗಳು ಇಳಿಕೆಯಾಗಿದ್ದಾಗಲೂ ಸಹ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಶುಲ್ಕವನ್ನು ಹೆಚ್ಚಿಸಿದೆ ಎಂದು ಅವರು ದೂರಿದರು.

ಕುಮಾರಸ್ವಾಮಿ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಿಜಾಮ್ ಆಡಳಿತದ ಅಂತ್ಯದ ಕುರುಹಾಗಿ ಏರ್ಪಾಡಾಗಿದ್ದ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಗೌರವ ರಕ್ಷೆ ಸ್ವೀಕರಿಸಿದರು. ಸಚಿವರುಗಳಾದ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 376ನೇ ವಿಧಿಗೆ ತಿದ್ದುಪಡಿ ತರಲಾಯಿತು, ಅತ್ಯಂತ ಹಿಂದುಳಿದ ಈ ವಲಯದಲ್ಲಿ ತಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಏರ್ಪಾಡಾಗಿದ್ದ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾದ್ ಮನೋಹರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಪರೇಡ್ ನಡೆಯಿತು. ಬಳಿಕ ಹೈದರಾಬಾದ್-ಕರ್ನಾಟಕ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾದ್ ಮನೋಹರ್, ಗಣಿಗಾರಿಕೆಯಿಂದ ಸಂಗ್ರಹವಾಗಿರುವ ಶುಲ್ಕದಿಂದ 15 ಸಾವಿರದ 274 ಕೋಟಿ ರೂಪಾಯಿ ಕ್ರಿಯಾ ಯೋಜನೆಯ ಪ್ರಸ್ತಾವನೆ ಸಲ್ಲಿಸಿದೆ, ಇದರ ಅನುಷ್ಠಾನದಿಂದ ಬರುವ 5 ವರ್ಷದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು.

ಮೆಗಾ ಡೈರಿಗೆ 108 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ, ತುಂಗಾಭದ್ರಾ ಜಲಾಶಯದಿಂದ 1 ಸಾವಿರದ 64 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ, ಒಟ್ಟಾರಿ ಖನಿಜ ನಿಧಿಯಿಂದ 6 ಮೊಬೈಲ್ ಆಂಬುಲೆನ್ಸ್ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಧ್ವಜಾರೋಹಣ ನೆರವೇರಿಸಿದರು. 14 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಈ ಸಂದರ್ಭವಾಗಿ ವಿವಿಧ ಸಾಮೂಹಿಕ ಕವಾಯತ್ ಮತ್ತು ಕಾರ್ಯಕ್ರಮಗಳು ನಡೆದವು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Petrol-diesel ಪಥಸಂಚಲನ ಕವಾಯತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ