'800 ಕೋಟಿ ರೂ.ವೆಚ್ಚದಲ್ಲಿ ಮೈಸೂರು-ಬೆಂಗಳೂರು ಮಧ್ಯೆ ರಸ್ತೆ'

#Bangalore-Mysore #H.D.Revanna # Elevated corridor

17-09-2018

ಬೆಂಗಳೂರು: ಮೈಸೂರು-ಬೆಂಗಳೂರು ಮಧ್ಯೆ 800 ಕೋಟಿ ರೂ.ವೆಚ್ಚದಲ್ಲಿ ಎಲಿವೇಟೆಡ್ ರಸ್ತೆಯನ್ನು ನಿರ್ಮಿಸುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಮೂಲಕ ನಿರ್ಮಾಣವಾಗುವ ಎಲಿವೇಟೆಡ್ ರಸ್ತೆ ಮೈಸೂರು ಹೊರ ವರ್ತುಲ ರಸ್ತೆಯಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮಾರ್ಗವಾಗಿ ಮೈಸೂರು ನಗರದವರೆಗೆ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸುದ್ದಿಗಾರರಿಗೆ ತಿಳಿಸಿದರು.

ಈಗ ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗುವ ದಶಪಥ ರಸ್ತೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಾಲಿ ಈಗಿರುವ ಮೈಸೂರು-ಬೆಂಗಳೂರು ನಡುವಣ ರಸ್ತೆಯ ಮೇಲ್ಭಾಗದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣವಾಗಲಿದೆ ಎಂದರು.

ಈಗಿರುವ ರಸ್ತೆ ರಾಮನಗರ, ಚನ್ನಪಟ್ಟಣ, ಮಂಡ್ಯ ಸೇರಿದಂತೆ ಹಲವು ಕಡೆ ಸಂಚಾರ ದಟ್ಟಣೆ ಹೆಚ್ಚಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸಲು ಪೂರಕವಾಗುವಂತೆ ಎಲಿವೇಟೆಡ್ ರಸ್ತೆ(ಮೇಲು ರಸ್ತೆ)ನಿರ್ಮಾಣವಾದರೆ ಸಂಚಾರ ಕಾರ್ಯ ಸುಗಮವಾಗುತ್ತದೆ ಎಂದರು.

ಈ ಕಾರಣಕ್ಕಾಗಿ ಪ್ರಸ್ತಾಪವೊಂದನ್ನು ಸಿದ್ಧಗೊಳಿಸಲಾಗಿದ್ದು, ಮುಖ್ಯಮಂತ್ರಿಗಳು ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಒಪ್ಪುವ ವಿಶ್ವಾಸವಿದೆ ಎಂದು ಹೇಳಿದರು.

ಇಷ್ಟೆಲ್ಲದರ ನಡುವೆ ಈಗಾಗಲೇ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ಬೈಪಾಸ್ ಇರುವ ಕಡೆಗಳಲ್ಲಿ ಭೂ ಸ್ವಾಧೀನ ಕಾರ್ಯ ಪೂರ್ಣವಾಗಿದೆ. ಉಳಿದ ಭೂ ಸ್ವಾಧೀನ ಕಾರ್ಯ ಸಧ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಹಾಗೆಯೇ ಲೋಕೋಪಯೋಗಿ ಇಲಾಖೆ ವತಿಯಿಂದ 2017-18ರ ಸಾಲಿನಲ್ಲಿ 1764.32 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆ, ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.

ಹಾಗೆಯೇ ಈ ಕುರಿತ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ಹಿಂತಿರುಗಿಸಿತ್ತು. ಆದರೂ ಯೋಜನೆಗೆ ಒಪ್ಪಿಗೆ ದೊರೆಯುವ ನಿರೀಕ್ಷೆಯಲ್ಲಿ ಹಲವು ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ನಿಗದಿಪಡಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಹಿಂತಿರುಗಿಸಿದ್ದರಿಂದ ಕಾಮಗಾರಿಗಳ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಈಗ ಅದನ್ನು ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ನಡೆಸಿದ್ದಾರೆ.

ಈಗ ಸದರಿ ಯೋಜನೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು ಆರ್ಥಿಕ ಇಲಾಖೆ ಕೂಡಾ ಅನುಮತಿ ನೀಡಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ರೇವಣ್ಣ ಅವರು ವಿವರಿಸಿದರು. ಈ ಮಧ್ಯೆ ಐದು ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ವಿವಿಧ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಬಹುತೇಕ ಪೂರ್ಣವಾಗಿವೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಮಳೆಯಿಂದ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Revanna Bangalore to Mysore ಅನುಮತಿ ಸಂದರ್ಭ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ