ಸಿದ್ದು ಬಳಿ ಅಸಮಾಧಾನ ತೋಡಿಕೊಂಡ ಶಾಸಕ ಸುಧಾಕರ್

#MLA sudhakar #siddaramaiah #operation kamala

17-09-2018

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಭೇಟಿ ಮಾಡಿದ್ದಾರೆ. ಭೇಟಿ ಆಗುತ್ತಲೇ ಸಾಲು ಸಾಲು ದೂರಿನ ಪಟ್ಟಿ ಓದಿದ ಶಾಸಕ ಸುಧಾಕರ್, ‘ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಕೆಲ ಶಾಸಕರ ಕಡೆಗಣಿಸಲಾಗುತ್ತಿದೆ. ಸಿದ್ದರಾಮಯ್ಯ ಆಪ್ತ ವಲಯದ ಶಾಸಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಕೊಡಿಸಿ ನ್ಯಾಯ ಕೊಡಿಸಿ’ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ತಮ್ಮ ಮಾತು ಮುಂದುವರೆಸಿದ ಅವರು, ‘ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಕಾಂಗ್ರೆಸ್ ಸರ್ಕಾರದ ಅವಧಿಗೂ ಈಗ ಮೈತ್ರಿ ಸರ್ಕಾರದ ಅಭಿವೃದ್ಧಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದಿದ್ದಾರೆ. ಜಿಲ್ಲಾ ಜನತೆ ಸಚಿವ ಸ್ಥಾನ ಅಲಂಕರಿಸಿ ಅಂತ ಪಟ್ಟು ಹಿಡಿದಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಮಾಡದೆ ಕಣ್ಣಾಮುಚ್ಚಾಲೆ ಆಟ ಆಡಲಾಗುತ್ತಿದೆ. ಸಿಕ್ಕ ಸಿಕ್ಕ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗುತ್ತಿದ್ದು, ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೇಳಲಾಗುತ್ತಿಲ್ಲ ಎಂದು ಸಿದ್ದರಾಮಯ್ಯನವರ ಬಳಿ ಅಸಮಾಧಾನ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ನವರ ಭೇಟಿ ಬಳಿಕ ಮಾಧ್ಯಮದವರ ಬಳಿ ಮಾತನಾಡಿ, ‘ಬಿಜೆಪಿಯಿಂದ ಆಪರೇಷನ್ ಕಮಲ ವಿಚಾರದ ಕುರಿತು ಪ್ರತಿಕ್ರಿಯಿಸಿ, ‘ತಾನು ರೋಗಿಯೂ ಅಲ್ಲ, ಸರ್ಜನ್ ಕೂಡ ಅಲ್ಲ ಹಾಗಾಗಿ ಆಪರೇಷನ್ ಗೆ ಒಳಗಾಗುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಲೇವಡಿ ಮಾಡಿದ್ದಾರೆ.

‘ತಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ. ಕಾಂಗ್ರೆಸ್ ಬಿಡುವುದಿಲ್ಲ, ಜಿಲ್ಲಾ ಮಟ್ಟದ ಸಮಸ್ಯೆಗಳ ಕುರಿತು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಗಮನಕ್ಕೂ ಕೂಡ ತಂದಿದ್ದೇನೆ. ಅವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Mla sudhakar operation kamala ನಿಷ್ಠಾವಂತ ರೋಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ