ಬಹುಪಯೋಗಿ ಈ ‘ಗುಲಾಬಿ’..!

Kannada News

02-06-2017

ಗುಲಾಬಿ.... ನೋಡಿದೊಡನೆ ಎಂಥವರ ಮುಖವಾದರೂ ಅರಳುತ್ತೆ. ಈ ಗುಲಾಬಿಯ ಚೆಲುವೇ ಅಂಥದ್ದು... ನೋಡುತ್ತಾ ಹೋದರೆ ಕಣ್ಣುಗಳಿಗೆ ಹಬ್ಬ... ಮನಸ್ಸಿಗೆ ಉಲ್ಲಾಸ.. ತನ್ನ ಸೌಂದರ್ಯದಿಂದ ಎಂಥವರನ್ನಾದರೂ ಸೆಳೆಯೋ ಶಕ್ತಿ ಇದೆ ಈ ಗುಲಾಬಿ ಹೂವಿಗೆ. ಬಹುತೇಕರ ಮನೆಗಳಲ್ಲಿ ಗುಲಾಬಿ ಗಿಡ ಕಾಮನ್. ಗುಲಾಬಿ ಹೂವಿದ್ದರೆ ಕೈತೋಟಕ್ಕೊಂದು ಕಳೆ. ಆದರೆ ನಿಮಗೆ ಗೊತ್ತಾ ಸೌಂದರ್ಯದ ವಿಷಯದಲ್ಲೂ ಗುಲಾಬಿ ಬಹುಪಯೋಗಿಯಾಗಿದೆ.

ಹೌದು... ನೀವು ಕೇಳಿರಬಹುದು.. ಹಿಂದೆ ರಾಜರ ಕಾಲದಲ್ಲಿ ರಾಣಿಯರು ಗುಲಾಬಿದಳ ತುಂಬಿದ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು. ಅಥವಾ ಗುಲಾಬಿ ಎಸಳುಗಳನ್ನು ಹಾಕಿದ ಹಾಲಿನಿಂದ ಮೀಯುತ್ತಿದ್ದರು. ಇದಕ್ಕೆ ಕಾರಣ ಗುಲಾಬಿಯಲ್ಲಿರೋ ಸೌಂದರ್ಯವರ್ಧಕ ಗುಣಗಳು. ಹೌದು... ಈ ಗುಲಾಬಿ ಉಪಯೋಗಿಸೋದಿಂದ ಸೌಂದರ್ಯ ಇಮ್ಮಡಿಯಾಗುತ್ತದೆ ಅನ್ನೋದು ಸಾಬೀತಾಗಿರೋ ವಿಷಯ.

ಗುಲಾಬಿ ಎಸಳುಗಳಲ್ಲಿ ಚರ್ಮ ಸುಕ್ಕುಗಟ್ಟದ ಹಾಗೆ ಮಾಡುವ ಗುಣವಿದೆ. ಆ್ಯಂಟಿ ಆಕ್ಸಿಡಂಟ್ ಗುಣವಿದೆ. ಜೊತೆಗೆ ಎ, ಸಿ, ಡಿ ಹಾಗೂ ಇ ವಿಟಾಮಿನ್ ಗಳ ಬೃಹತ್ ಆಗರ ಈ ಗುಲಾಬಿ. ಬಹುತೇಕ ಎಲ್ಲಾ ಸೌಂದರ್ಯವರ್ಧಕಗಳಿಗೂ ಗುಲಾಬಿಯನ್ನು ಬಳಸಿಯೇ ಬಳಸುತ್ತಾರೆ. ಹಾಗಿದ್ರೆ ಗುಲಾಬಿಯನ್ನು ಹೇಗೆ ಉಪಯೋಗಿಸಿದರೆ ಸೌಂದರ್ಯಕ್ಕೆ ಒಳ್ಳೆಯದು ಅನ್ನೋದನ್ನು ನೋಡೋಣ.

ರೋಸ್ ಆಯಿಲ್: ಗುಲಾಬಿ ಎಣ್ಣೆಯನ್ನು ದಿನವೂ ಉಪಯೋಗಿಸಿದರೆ ಒಣ ಚರ್ಮಕ್ಕೆ ಒಳ್ಳೆಯದು. ಇದರಿಂದ ಶುಷ್ಕ ಚರ್ಮ ಹೋಗಿ ಚರ್ಮದಲ್ಲಿ ಹೊಳಪು ಮೂಡುತ್ತದೆ. ಹೀಗಾಗಿ ಅನೇಕ ಸ್ಕಿನ್ ಕೇರ್ ಗಳಲ್ಲಿ ಈ ರೋಸ್ ಆಯಿಲ್ ಅನ್ನು ಉಪಯೋಗಿಸುತ್ತಾರೆ.

ಗುಲಾಬಿ ಬೀಜದ ಎಣ್ಣೆ: ಇದು ಗುಲಾಬಿ ಎಣ್ಣೆಯಂತೆಯೇ ಕೆಲಸ ಮಾಡುತ್ತೆ. ಇದನ್ನು ಗುಲಾಬಿ ಬೀಜದಿಂದ ತಯಾರಿಸುತ್ತಾರೆ. ಈ ಆಯಿಲ್ ನಿಂದ ದಿನವೂ ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಿದಲ್ಲಿ ಹಣೆ ಮೇಲಿನ ಗೆರೆಗಳು ಹಾಗೂ ಮುಖದ ಮೇಲೆ ಮೂಡಿರುವ ರಿಂಕಲ್ ಗಳು ಕಡಿಮೆಯಾಗುತ್ತವೆ. ಅಲ್ಲದೇ ಇದು ಕಣ್ಣಿನ ಸುತ್ತ ಉಂಟಾಗುವ ಕಪ್ಪು ವರ್ತುಲವನ್ನೂ ಹೋಗಲಾಡಿಸಲು ಸಹಾಯಮಾಡುತ್ತದೆ.

ರೋಸ್ ವಾಟರ್: ಗುಲಾಬಿ ದಳಗಳ ನೀರು ಪ್ರಮುಖ ಸೌಂದರ್ಯವರ್ದಕವಾಗಿ ಕೆಲಸ ಮಾಡುತ್ತದೆ. ರೋಸ್ ವಾಟರ್ ಮುಖಕ್ಕೆ ಅಪ್ಲೈ ಮಾಡೋದ್ರಿಂದ ಚರ್ಮ ರಿಫ್ರೆಶ್ ಆಗುತ್ತೆ. ದಣಿದ ಚರ್ಮಕ್ಕೆ ಇದು ಕಾಂತಿ ನೀಡುತ್ತೆ. ಅಲ್ಲದೇ ರೋಸ್ ವಾಟರ್ ನಲ್ಲಿ ಅದ್ದಿದ ಹತ್ತಿಯನ್ನು ಕಣ್ಣ ಮೇಲಿಟ್ಟುಕೊಂಡಲ್ಲಿ ಕಣ್ಣಿಗೆ ಆದ ಆಯಾಸ ಮರೆಯಾಗುತ್ತೆ. ಜೊತೆಗೆ ಕಪ್ಪು ವರ್ತುಲ ಹೋಗಲಾಡಿಸೋದಕ್ಕೂ ಇದು ಸಹಕಾರಿ. ರೋಸ್ ವಾಟರ್ ಮುಖ್ಯವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕೆಲಸ ಮಾಡುತ್ತೆ.

ಇಷ್ಟೇ ಅಲ್ಲದೇ ಗುಲಾಬಿ ಎಸಳುಗಳನ್ನು ಜಜ್ಜಿ ಅದರಿಂದ ಬರುವ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿ ಹೆಚ್ಚುತ್ತದೆ. ಹೀಗೆ ಗುಲಾಬಿ ಬಹಳ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅದನ್ನೇ ದಿನವೂ ಶ್ರದ್ಧೆಯಿಂದ ಮಾಡಿದಲ್ಲಿ ಫಲಿತಾಂಶ ಪಕ್ಕಾ. ಸೌಂದರ್ಯ ಹೆಚ್ಚಿಸಿಕೊಳ್ಳಲು, ಕಾಪಾಡಿಕೊಳ್ಳಲು ಸಾವಿರಾರು ರೂಪಾಯಿ ನೀಡಿ ಪಾರ್ಲರ್ ಗಳಿಗೆ ಹೋಗಬೇಕೆಂದಿಲ್ಲ. ಬದಲಾಗಿ ಮನೆಯಲ್ಲಿ ಕುಳಿತೇ ಆ ಕೆಲಸ ಮಾಡಬಹುದು. ಅದಕ್ಕಾಗಿ ಒಂದಿಷ್ಟು ಸಮಯ ಮೀಸಲಿಡಬೇಕಷ್ಟೇ. ಹಾಗಿದ್ರೆ ಇನ್ಯಾಕೆ ತಡ... ಗುಲಾಬಿ ದಳಗಳಿಂದ ನಿಮ್ಮ ಸೌಂದರ್ಯವೂ ಅರಳಲಿ.


ಸಂಬಂಧಿತ ಟ್ಯಾಗ್ಗಳು

ಸೌಂದರ್ಯ ಸೌಂದರ್ಯ ಗುಲಾಬಿ ಗುಲಾಬಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ