ಜೀತಕ್ಕಿದ್ದ 14 ಮಂದಿ ಕಾರ್ಮಿಕರ ರಕ್ಷಣೆ

#Slaves #Police # protected

14-09-2018

ಬೆಂಗಳೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲೆಕುಪ್ಪೆಯ ಟಿಬೆಟಿಯನ್ ಕಾಲೋನಿಯ 10ನೇ ಕ್ಯಾಂಪ್‍ನಲ್ಲಿರುವ ಶುಂಠಿ ತೋಟದಲ್ಲಿ ಜೀತಕ್ಕಿದ್ದ 14 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ಬೈಲೆಕುಪ್ಪೆ ಪೊಲೀಸ್, ಮೈಸೂರು ಜಿಲ್ಲಾಡಳಿತ, ಹುಣಸೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಕೆ.ನಿತೀಶ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಅಧಿಕಾರಿಗಳು ಸಂತ್ರಸ್ತರನ್ನು ವಿಚಾರಣೆಗೆ ಒಳಪಡಿಸಿದ ನಂತರ ಇವರೆಲ್ಲಾ ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಬಿಡುಗಡೆಗೊಂಡ ಈ ಎಲ್ಲಾ ಸಂತ್ರಸ್ತ ಜೀತದಾಳುಗಳಿಗೆ ಜಿಲ್ಲಾಡಳಿತ ಬಿಡುಗಡೆ ಪ್ರಮಾಣ ಪತ್ರ ನೀಡಿ ತೋಟದ ಮಾಲೀಕರ ಜೊತೆ ಈ ಜೀತದಾಳುಗಳು ಮಾಡಿಕೊಂಡಿದ್ದ ಎಲ್ಲಾ ಒಪ್ಪಂದಗಳಿಂದ ಅವರನ್ನು ಮುಕ್ತಿಗೊಳಿಸಿದೆ. ಜೀತದಾಳುಗಳ ಪುನರ್ವಸತಿ ಯೋಜನೆಯಡಿ ತಲಾ 20ಸಾವಿರ ರೂಪಾಯಿಗಳ ಆರಂಭಿಕ ಪರಿಹಾರ ಧನ ನೀಡಲಾಗುತ್ತಿದೆ.

ಸೆಪ್ಟೆಂಬರ್ 8ರಂದು ಫಾರ್ಮ್ ಮಾಲೀಕನನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಬೈಲೆಕುಪ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿಯ 370ನೇ (ಮಾನವ ಕಳ್ಳಸಾಗಣೆ) ಮತ್ತು ಜೀತಕಾರ್ಮಿಕ ನಿರ್ಮೂಲನಾ ಕಾಯ್ದೆಯ ಸೆಕ್ಷನ್ 16,17 ಮತ್ತು 18 ಅಡಿ ಈ ಪ್ರಕರಣ ದಾಖಲು ಮಾಡಲಾಗಿದೆ. ಈ ಫಾರ್ಮ್ ನಡೆಸುತ್ತಿದ್ದ ಮಾಲೀಕನ ಸಹೋದರ ಮತ್ತು ಭಾವನನ್ನು ಕೂಡ ಪ್ರಕರಣದಲ್ಲಿ ಸಹ ಆರೋಪಿಗಳನ್ನಾಗಿಸಿದ್ದು, ಪೊಲೀಸರು ಇವರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ರಕ್ಷಣೆಗೆ ಒಳಗಾಗಿರುವ ಈ ಎಲ್ಲ ಜೀತ ಕಾರ್ಮಿಕರು 28ರಿಂದ 60ವರ್ಷ ವಯಸ್ಸಿನ ಒಳಗಿನವರು. ಹೆಚ್ಚಿನವರು 30ರ ಆಸುಪಾಸು ಪ್ರಾಯದವರು. ಇವರ ಪೈಕಿ ಏಳು ಮಂದಿ ಐದು ತಿಂಗಳಿನಿಂದ ಈ ದುಡಿಯುತ್ತಿದ್ದರೆ, ಉಳಿದವರು ಮೂರು ತಿಂಗಳಿನಿಂದ ದುಡಿಯುತ್ತಿದ್ದರು. ಈ ಎಲ್ಲಾ ಕಾರ್ಮಿಕರನ್ನು ಗದಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ಲಿಂಗಸಗೂರು, ಹುಬ್ಬಳ್ಳಿ ಮತ್ತು ನೆಲಮಂಗಲದಿಂದ ಕರೆತರಲಾಗಿತ್ತು. ತೋಟದ ಮಾಲೀಕನ ಸಹೋದರ ಇವರಿಗೆ ಸುಳ್ಳು ಆಮಿಷ ಒಡ್ಡಿ ಇಲ್ಲಿಗೆ ಕರೆ ತಂದಿದ್ದ.

ದಿನದಲ್ಲಿ ಎಂಟು ಗಂಟೆ ಕೆಲಸ ಮಾಡಬೇಕು. ದಿನ ಒಂದಕ್ಕೆ 350ರೂಪಾಯಿಗಳನ್ನು ನೀಡಲಾಗುವುದು. ಇದರ ಜೊತೆಗೆ ಉಳಿದುಕೊಳ್ಳಲು ಮನೆ, ಮೂರು ಹೊತ್ತು ಒಳ್ಳೆಯ ಊಟ, ಪ್ರತಿ ರಾತ್ರಿ ಮದ್ಯವನ್ನು ನೀಡಲಾಗುವುದು ಎಂದು ಆತ ಎಲ್ಲರಿಗೂ ವಾಗ್ದಾನ ಮಾಡಿದ್ದ. ಮೊದಲು 15 ದಿನ ಕೆಲಸ ಮಾಡಿ. ಆಗ ನಿಮಗೆ 15 ದಿನಗಳ ಸಂಬಳ ನೀಡಲಾಗುವುದು. ಒಂದು ವೇಳೆ ಈ ಕೆಲಸ ಇಷ್ಟವಾದರೆ ಮುಂದುವರಿಸಿ, ಇಲ್ಲದೇ ಹೋದರೆ ಮನೆಗೆ ವಾವಸ್ ಕಳುಹಿಸಲಾಗುವುದು? ಎಂದು ಕೂಡ ಆತ ಎಲ್ಲರನ್ನೂ ನಂಬಿಸಿದ್ದ. ಇದನ್ನು ನಂಬಿ ಎಲ್ಲರೂ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಈ ವಾಗ್ದಾನದಂತೆ ಆತ ಒಂದು ದಿನವೂ ನಡೆದುಕೊಳ್ಳಲಿಲ್ಲ. ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ಜೊತೆಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ, ಕೂಲಿ ಹಣವನ್ನೂ ನೀಡಿರಲಿಲ್ಲ.

ಈ ಎಲ್ಲ ಜೀತ ಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆಯವರೆಗೆ ದುಡಿಯಬೇಕಿತ್ತು. ಗಿಡ ನೆಡುವುದು, ಕಳೆ ಕೀಳುವುದು, ಕೀಟನಾಶಕ ಸಿಂಪಡನೆ, ಗೊಬ್ಬರ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಅಡುಗೆ ಮಾಡಲು ಯಾರನ್ನಾದರೂ ಒಬ್ಬರಿಗೆ ತೀರಾ ಅತ್ಯಲ್ಪ ಅವಧಿ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಅವರು ಅಡುಗೆ ಮಾಡಿ ಪುನಃ ಕೆಲಸ ಮಾಡಬೇಕಿತ್ತು. ಅವರಿಗೆ ಮಾಲೀಕ ಸ್ವಲ್ಪ ಅನ್ನ, ಸಾಂಬಾರ್ ನೀಡುತ್ತಿದ್ದ. ಅವರ ಮೇಲೆ ಮಾಲೀಕ, ಅವನ ಸಹೋದರ ಅಥವಾ ಭಾವ ಸದಾ ಕಣ್ಣಿಡುತ್ತಿದ್ದರು. ಮಲಗಲು ಚಿಕ್ಕ ಕೋಣೆ ನೀಡಲಾಗುತ್ತಿತ್ತು. ಅವರು ಹೊರಗೆ ಹೋಗದಂತೆ ಕಾವಲು ಕಾಯುವ ಸಂಬಂಧ ಅಲ್ಲಿಯೇ ಸಮೀಪ ಮಾಲೀಕ ಮಂಚದ ಮೇಲೆ ಮಲಗುತ್ತಿದ್ದ.

ತಮ್ಮ ಸಂಬಳ ನೀಡುವಂತೆ ಅಥವಾ ರಜೆ ಕೇಳಿದರೆ ಮಾಲೀಕ ಎಲ್ಲರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಜೊತೆಗೆ ಹೀನಾಯವಾಗಿ ಬೈಯುತ್ತಿದ್ದ. ಮೋಟಾರ್ ಸೈಕಲ್ ಚೈನಿನಿಂದ ಹಾಗೂ ಕೋಲಿನಿಂದ ಅವರನ್ನು ಥಳಿಸಲಾಗುತ್ತಿತ್ತು. ಇವುಗಳಿಂದ ಆದ ಗಾಯವನ್ನು ರಕ್ಷಣಾ ಕಾರ್ಯಾಚರಣೆ ವೇಳೆ ಈ ಸಂತ್ರಸ್ತರು ತೋರಿಸಿದರು. ಆ ಫಾರ್ಮಿನಿಂದ ಕೆಲಸ ಕಮ್ಮಿ ಇದ್ದಾಗ ಎಲ್ಲಾ ಕೆಲಸದವರನ್ನು ಮತ್ತೊಂದು ತೋಟಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಬೇರೆ ಫಾರ್ಮ್‍ನಲ್ಲಿ ಕೆಲಸ ಮಾಡಿದಾಗ ಅದರ ಮಾಲೀಕ ಆ ಹಣವನ್ನು ಈ ಮಾಲೀಕನಿಗೆ ನೀಡುತ್ತಿದ್ದರು. ಆದರೆ ಆ ಹಣವನ್ನು ಮಾಲೀಕ ಈ ಕಾರ್ಮಿಕರಿಗೆ ನೀಡುತ್ತಿರಲಿಲ್ಲ.

ರಕ್ಷಣೆಗೆ ಒಳಗಾದ ಸಂತ್ರಸ್ತರ ಪೈಕಿ 38 ವರ್ಷದ ಒಬ್ಬ ವ್ಯಕ್ತಿ ತನ್ನ ಗೋಳು ಹೇಳಿಕೊಂಡಿದ್ದು ಹೀಗೆ: ನಾನು ಗದಗದವನು. ಐದು ತಿಂಗಳ ಹಿಂದೆ ನನ್ನ ಹೆಂಡತಿ ಮತ್ತು ಎರಡು ವರ್ಷದ ಮಗುವನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಅವರ ಬಳಿ 2 ಸಾವಿರ ರೂಪಾಯಿ ಮಾತ್ರ ಇತ್ತು. ಹೆಚ್ಚಿಗೆ ದುಡಿದು ಮನೆಯವರಿಗೆ ದುಡ್ಡು ಕಳಿಸುವ ಉದ್ದೇಶದಿಂದ ಬಂದೆ. ಈ ಐದು ತಿಂಗಳಿನಿಂದ ಒಮ್ಮೆಯೂ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಅವರಿಗೆ ಏನಾಗಿದೆಯೋ ಯಾವ ಪರಿಸ್ಥಿತಿಯಲ್ಲಿ ಇದ್ದಾರೋ ನನಗೆ ಗೊತ್ತಿಲ್ಲ. ನನ್ನ ಕೂಲಿ ಹಣ ನನಗೆ ಕೊಟ್ಟುಬಿಡಿ, ನಾನು ಪಾಪಸ್ ಹೋಗುತ್ತೇನೆ ಎಂದು ಹಲವು ಬಾರಿ ಮಾಲೀಕನಿಗೆ ಹೇಳಿದೆ. ಹಾಗೆ ಕೇಳಿದಾಗಲೆಲ್ಲಾ ನನಗೆ ಚೈನ್ ಮತ್ತು ಕೋಲಿನಿಂದ ಹೊಡೆಯತೊಡಗಿದರು. ಇನ್ನೂ ಕೆಲವು ತಿಂಗಳು ಕೆಲಸ ಮಾಡಿದರೆ ಹಣ ನೀಡುವುದಾಗಿ ಮಾಲೀಕ ಹೇಳಿದ. ನಾನು ಈಗ ಬಿಡುಗಡೆ ಹೊಂದಿರುವುದು ತುಂಬಾ ಸಂತೋಷ ತಂದಿದೆ. ದೇವರ ಹಾಗೆ ನೀವು ಬಂದು ನನ್ನನ್ನು ಕಾಪಾಡಿದಿರಿ? ಎಂದು ಆತ ಹೇಳಿದ.

ಬಿ.ಕಾಂ ಪದವೀಧರನಾದ ಒಬ್ಬ ಯುವಕ ಎರಡು ತಿಂಗಳ ಹಿಂದೆ ಹೇಗೋ ಇಲ್ಲಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದ. ಆತ ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ ಈ ವಿಷಯ ಬಹಿರಂಗಗೊಳ್ಳಲು ಸಾಧ್ಯವಾಯಿತು. ಆತ ಗದಗಕ್ಕೆ ಹಿಂದಿರುಗಿದ ಮೇಲೆ ಜೀತಕ್ಕಿದ್ದ ಇನ್ನೊಂದು ಕಾರ್ಮಿಕನ ಸಹೋದರನ ಹುಡುಕಾಟದಲ್ಲಿ ತೊಡಗಿದ. ಕೊನೆಗೂ ಆತ ಸಿಕ್ಕಿದ ಮೇಲೆ ಆತನ ಸಹೋದರ ಪಡುತ್ತಿರುವ ಕಷ್ಟದ ಬಗ್ಗೆ ವಿವರಿಸಿದ. ಆ ಸಹೋದರ ಮತ್ತು ತಪ್ಪಿಸಿಕೊಂಡ ಕಾರ್ಮಿಕ ನಂತರ ಸ್ಥಳೀಯ ಸಮುದಾಯದ ನಾಯಕರನ್ನು ಸಂಪರ್ಕಿಸಿ ಬೆಂಗಳೂರಿನ ಲೋಕಾಯುಕ್ತದ ಡಿವೈಎಸ್ಪಿ, ಮಹಾದೇವ್ ಟಿ ಅವರಿಗೆ ವಿಷಯವನ್ನು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Slaves Police ಡಿವೈಎಸ್ಪಿ ಕಾರ್ಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ