‘ನಾವು ಕೈ ಕಟ್ಟಿ ಕುಳಿತಿಲ್ಲ’ ಬಿಜೆಪಿಗೆ ಸಿಎಂ ತಿರುಗೇಟು

#H.D.Kumaraswamy #government #BJP

14-09-2018

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ರಾಜ್ಯಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಅದರೆ ನಾವು ಕೈ ಕಟ್ಟಿ ಕುಳಿತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಆಮಿಷವೊಡ್ಡುತ್ತಿರುವವರ ಬಗ್ಗೆ ಮಾಹಿತಿ ದೊರೆತಿದ್ದು, ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ನಾನು ಆತಂಕಗೊಂಡಿಲ್ಲ. ಅವರಿಗೇನು ಬೇಕೋ (ಆಪರೇಷನ್ ಕಮಲ)ಮಾಡಿಕೊಳ್ಳಲಿ. ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಬೆಳಗಣಿಗೆಗಳ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ ಎಂದರು.

ಹೊಸ ಸರ್ಕಾರ ರಚಿಸಲು ಅವರು ಸಂಪನ್ಮೂಲ ಕ್ರೋಢೀಕರಣದಲ್ಲಿ ತೊಡಗಿದ್ದಾರೆ. ಸಂಪನ್ಮೂಲ ಪೂರೈಕೆ ಮಾಡುವವರ ಬಗ್ಗೆ ತಮಗೆ ಮಾಹಿತಿ ಇದೆ. ಶಾಸಕರುಗಳಿಗೆ ಮುಂಗಡ ಹಣ ನೀಡುವ ಕೆಲಸವೂ ಸಹ ನಡೆಯುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಇಂತಹ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಳೆದ 2009–10ರಲ್ಲಿ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಯಾರ್ಯಾರಿದ್ದಾರೆ. ಸಕಲೇಶಪುರದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ರೆಸಾರ್ಟ್ ಮಾಡಿ ಕೈ ಸುಟ್ಟುಕೊಂಡು ಹೆಂಡತಿಯನ್ನು ಹತ್ಯೆ ಮಾಡಿ ಜೈಲು ಸೇರಲು ಕಾರಣರಾದವರು ಇದರ ಹಿಂದೆ ಯಾರು ಇದ್ದಾರೆ. ತಮಗೆ ಎಲ್ಲವೂ ಗೊತ್ತಿದೆ ಎಂದರು.

ಬಿಜೆಪಿಗೆ ನೂತನ ಸರ್ಕಾರ ರಚಿಸಲು ಹಣ ನೀಡುತ್ತಿರುವವರು ಲಾಟರಿ ದಂಧೆ ನಡೆಸುವವರಾಗಿದ್ದಾರೆ. ಇಂತಹ ಪ್ರಯತ್ನದ ಹಿಂದೆ ಇರುವವರ ಜಾತಕ ತಮಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ತಾವು ಬಿಜೆಪಿ ಪ್ರಯತ್ನಕ್ಕೆ ಅಧೀರರಾಗುವ ಪ್ರಶ್ನೆಯೇ ಇಲ್ಲ. ನಾನೊಬ್ಬ ಮುಕ್ತ ಮುನುಷ್ಯ. ನನಗೆ ಏನು ಮಾಡಬೇಕು ಎನ್ನವುದು ತಿಳಿದಿದೆ ಎಂದು ಕುಮಾರ ಸ್ವಾಮಿ ಹೇಳಿದರು.

ಸರ್ಕಾರವನ್ನು ಅಸ್ಥಿರಗೊಳಿಸುವವರು ತನ್ನ ಪ್ರಯತ್ನ ಮುಂದುವರೆಸಲಿ. ನಾನು ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುವ ಕೆಲಸದಲ್ಲಿ ನಿರತನಾಗುತ್ತೇನೆ. ಈ ವಿಚಾರದಲ್ಲಿ ಮಾಧ್ಯಮವನ್ನು ದೂರಲು ಹೋಗುವುದಿಲ್ಲ. ಸರ್ಕಾರ ಉರುಳುವ ಕುರಿತು ಮಾಧ್ಯಮಗಳು ನೀಡುತ್ತಿರುವ ಗಡುವು ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಗಣೇಶ ಚತುರ್ಥಿ ನಂತರ ಇದೀಗ ಅಕ್ಟೋಬರ್ 2ಕ್ಕೆ ಗಡುವು ಮುಂದಕ್ಕೆ ಹೋಗಿರಬಹುದು. ಕೆಲವು ರಾಜಕೀಯ ಪಕ್ಷಗಳ ನಾಯಕರು ಹೇಳಿದಂತೆ ನೀವು ವರದಿ ಮಾಡುತ್ತೀರಾ. ಅಂತಹ ರಾಜಕೀಯ ನಾಯಕರಿಗೆ ರಾಜಕೀಯ ದುರುದ್ದೇಶವಿರುತ್ತದೆ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದರು.

ದುರದೃಷ್ಟವೆಂದರೆ ಮಾಧ್ಯಮಗಳ ವರದಿಯಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಧಿಕಾರಿ ವರ್ಗದಲ್ಲಿ ಗೊಂದಲ ನಿರ್ಮಾಣವಾಗಿದೆ. ಹೀಗಾಗಿ ತಾವು ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಒತ್ತು ನೀಡುವುದಾಗಿ ಕುಮಾರ ಸ್ವಾಮಿ ಹೇಳಿದರು.

ಜಾರಕಿಹೊಳಿ ಸಹೋದರರು, ಎಲ್ಲಾ ಸಚಿವರು, ಮೈತ್ರಿ ಕೂಟದ ಶಾಸಕರು ತಮ್ಮ ಬಳಿ ಇದ್ದಾರೆ. ಹಾಗಾಗಿ ಯಾವುದೇ ತೊಂದರೆ ಇಲ್ಲ. ಆದರೆ ಬಿಜೆಪಿ ನಾಯಕರು ಮತ್ತು ಯಡಿಯೂರಪ್ಪ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರು ರೆಸಾಟರ್ಟ್ ಗೆ ಹೋಗಲು ತಯಾರಾಗುತ್ತಿದ್ದಾರೆ. ಇದು ತಮಗೆ ಸಂಬಂಧಪಟ್ಟ ವಿಚಾರವಲ್ಲ. ಬಿಜೆಪಿಯವರು ಏನೇ ಮಾಡಿದರೂ ತಾವು ತಲೆ ಕೆಡಿಸಕೊಳ್ಳುವುದಿಲ್ಲ ಎಂದು ಹೇಳಿದರು.

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಸಾಧಕಭಾದಕಗಳ ಕುರಿತಂತೆ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ನಂತರ ಸದ್ಯದಲ್ಲೇ ದೆಹಲಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲಾಗುವುದು ಎಂದು ಹೇಳಿದರು. ಕೊಡಗು ನೆರೆ ಸಂತ್ರಸ್ಥರಿಗಾಗಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಕೇಂದ್ರದಿಂದ 10 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy opposition ನ್ಯಾಯಾಧೀಕರಣ ಧರ್ಮಸ್ಥಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ