‘ಅಧಿಕಾರಿಗಳು ಕಚೇರಿಯಲ್ಲೇ ಕಾಲ ಕಳೆಯುವುದನ್ನು ಸಹಿಸುವುದಿಲ್ಲ’

#Traffic Police  #officers #G. Parameshwara

12-09-2018

ಬೆಂಗಳೂರು: ನಗರದಲ್ಲಿ ಗಸ್ತು ವ್ಯವಸ್ಥೆ ಸಮರ್ಪಕವಾಗಿದ್ದರೆ ಅಪಘಾತ ಕೃತ್ಯಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಗಸ್ತು ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಬೇಕು. ಇದನ್ನು ಪರಿಶೀಲಿಸಲು ತಾವು ರಾತ್ರಿ-ಹಗಲೆನ್ನದೆ ಠಾಣೆಗಳಿಗೆ ದಿಢೀರ್ ಭೇಟಿ ನೀಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಿ ಅಪರಾಧಿಗಳಿಂದ ಸ್ವಯಂ ರಕ್ಷಣೆ ಪಡೆಯಲು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ (ಎಎಸ್‍ಐ) ಗೆ ಪಿಸ್ತೂಲು ನೀಡಲು ಕ್ರಮಕೈಗೊಳ್ಳಲಾಗುವುದು. ಇದರ ಸಾಧಕ-ಬಾಧಕಗಳನ್ನುಪರಿಶೀಲಿಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು.

ನಗರದಲ್ಲಿ ಹೆಚ್ಚುತ್ತಿರುವ ವಿದೇಶಿಗರ ಹಾವಳಿಯನ್ನು ಹತ್ತಿಕ್ಕಲು ಕೂಡಲೇ ವೀಸಾ ಅವಧಿ ಮುಗಿದಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಅವರ ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಗರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಈಶಾನ್ಯ ವೈಟ್‍ಫೀಲ್ಡ್ ಪೂರ್ವ ಹಾಗೂ ಆಗ್ನೇಯ ವಲಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ಆಫ್ರಿಕಾ ಇನ್ನಿತರ ವಿದೇಶಿಗರು ಹಾವಳಿ ನಡೆಸುತ್ತ ಸ್ಥಳೀಯರ ಶಾಂತಿಗೆ ಭಂಗ ತರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದರು.

ಕ್ರಿಕೆಟ್ ನೋಡಲು ಬಂದು ವೀಸಾ ಅವಧಿ ಮುಗಿದಿದ್ದರೂ ಹಲವು ವಿದೇಶಿಗರು ನಗರದಲ್ಲಿ ನೆಲೆಸಿದ್ದಾರೆ. ಇವರ ಜೊತೆಗೆ ವಿದ್ಯಾರ್ಥಿ ಹಾಗೂ ವ್ಯಾಪಾರಿ ವೀಸಾದಲ್ಲಿ ಬಂದಿರುವ ಕೆಲ ಆಫ್ರಿಕನ್ನರು ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿರುವ ಮಾಹಿತಿಯಾಧರಿಸಿ ಕಠಿಣ ಕ್ರಮಕೈಗೊಳ್ಳುವಂತೆ ಸಲಹೆ ಮಾಡಿದರು.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರ ಹಂತದ ಮೇಲ್ಪಟ್ಟ ಅಧಿಕಾರಿಗಳ ಜತೆ ಅಪರಾಧ ಪರಿಶೀಲನೆ ಸಭೆಯಲ್ಲಿ ನಗರದ ಅಪರಾಧ ಪ್ರಕರಣಗಳನ್ನು ಅಂಕಿ ಸಂಖ್ಯೆಗಳ ಸಮೇತ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ವೀಸಾ ಅವಧಿ ಮುಗಿದ ವಿದೇಶಿಗರನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ಕಳುಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಅದಕ್ಕೆ ಆ ವ್ಯಾಪ್ತಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಚಾರಿ ಪೊಲೀಸರು ಮತ್ತು ಅಧಿಕಾರಿಗಳಿಗೆ ಕಚೇರಿಯಲ್ಲಿ ಹೆಚ್ಚಿನ ಕೆಲಸವಿಲ್ಲದಿರುವುದರಿಂದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹೆಚ್ಚಿನ ಸಮಯವನ್ನು ರಸ್ತೆಯಲ್ಲೇ ಕಳೆದು ಸಂಚಾರ ದಟ್ಟಣೆ ಸುಗಮಗೊಳಿಸಲು ಮುಂದಾಗಬೇಕು. ಪೇದೆಗಳನ್ನು ಮಾತ್ರ ರಸ್ತೆಯಲ್ಲಿ ಬಿಟ್ಟು ಅಧಿಕಾರಿಗಳು ಕಚೇರಿಯಲ್ಲಿ ಕಾಲ ಕಳೆಯುವುದನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಯಾವುದೇ ರಸ್ತೆಯಲ್ಲಿ ಅಪರಾಧ ಕೃತ್ಯ ನಡೆದಾಗ ಕಾನೂನು ಸುವ್ಯವಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮೊದಲೇ ಸಂಚಾರ ಪೊಲೀಸರಿಗೆ ಅದರ ಮಾಹಿತಿ ದೊರೆಯಬೇಕು. ಅಧಿಕಾರಿಗಳು ರಸ್ತೆಯಲ್ಲಿದ್ದರೆ ಎಷ್ಟೋ ಅಪರಾಧ ಕೃತ್ಯಗಳು ಕಡಿಮೆಯಾಗಲಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Visa G.Parameshwara ಅಪರಾಧ ದಂಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ