ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರ ಕಟ್ಟುನಿಟ್ಟಿನ ಸೂಚನೆ

#G.parameshwara #Police officers #

12-09-2018

ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಹತ್ತಿಕ್ಕಿ ಮಾದಕ ವಸ್ತು ಮಾರಾಟ ಜಾಲವನ್ನು ಬೇಧಿಸುವಂತೆ ಗೃಹ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ನಗರ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ, ಮನೆಗಳವು ಇನ್ನಿತರ ಅಪರಾಧ ಕೃತ್ಯಗಳನ್ನು ನಿಯಂತ್ರಣದಲ್ಲಿಟ್ಟು ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಬೇಕು ಎಂದು ಹೇಳಿದರು.

ನಗರ ಪೊಲೀಸ್ ಕಮಿಷನರೇಟ್‍ನ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಹಂತದಿಂದ ಮೇಲ್ಪಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪರಮೇಶ್ವರ್ ಅವರು ವಿದೇಶಗಳಲ್ಲಿ ಹೆಸರು ಗಳಿಸಿರುವ ಬೆಂಗಳೂರಿನ ಶಾಂತಿ, ನೆಮ್ಮದಿಗೆ ಭಂಗ ತರುವಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಅಪರಾಧ ಕೃತ್ಯಗಳಿಗೆ ಹೊರ ರಾಜ್ಯಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಆರೋಪಿಗಳು ಬರುತ್ತಿದ್ದು, ಅವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ನಗರದಲ್ಲಿನ ಜನರ ಜೀವನಶೈಲಿ ಬದಲಾಗುತ್ತಿರುವಂತೆ, ಅಪರಾಧ ಕೃತ್ಯಗಳಲ್ಲೂ ಬದಲಾವಣೆಯಾಗುತ್ತಿವೆ. ಪೊಲೀಸರಿಗೆ ಸವಾಲಾಗುವ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಅವುಗಳನ್ನು ಹತ್ತಿಕ್ಕಲು ಸಿದ್ಧರಾಗಿರಬೇಕು. ಮಾದಕ ವಸ್ತು ಮಾರಾಟ ಜಾಲ ಕೂಡ ವ್ಯವಸ್ಥಿತವಾಗಿ ಹರಡುತ್ತಿದ್ದು, ಇದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಪರಾಧಿಗಳ ಮೇಲೆ ಹದ್ದಿನಕಣ್ಣಿಟ್ಟು ಅಗತ್ಯ ಬಿದ್ದರೆ, ಗೂಂಡಾಕಾಯ್ದೆ ದಾಖಲಿಸುವಂತೆಯೂ ಅವರು ಸೂಚಿಸಿದರು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬಿ.ಕೆ.ಸಿಂಗ್, ನಂಜುಂಡ ಸ್ವಾಮಿ ಸೇರಿದಂತೆ, ಎಲ್ಲಾ ಡಿಸಿಪಿ, ಎಸಿಪಿಗಳು ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

G.parameshwara Crime ರೌಡಿ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ