ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಿ.ಟಿ.ರವಿ ಒತ್ತಾಯ

#Dattatreya peetha  #Priest # C.T.Ravi #Bababudan Giri

11-09-2018

ಬೆಂಗಳೂರು: ಚಿಕ್ಕಮಗಳೂರಿನ ಬಾಬಾಬುಡನಗಿರಿ-ದತ್ತಾತ್ರೇಯ ಪೀಠದಲ್ಲಿ ಹಿಂದೂ ಆರ್ಚಕರನ್ನು ರಾಜ್ಯ ಸರ್ಕಾರ ಕೂಡಲೇ ನೇಮಕ ಮಾಡಬೇಕೆಂದು ಬಿಜೆಪಿ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಬಾಬಾಬುಡನಗಿರಿಯಲ್ಲಿ ಮುಜಾವರ್ ಮಾತ್ರ ನೇಮಕ ಮಾಡಿದ್ದು, ಇದು ಆಕ್ಷೇಪಾರ್ಹ. ಕೂಡಲೇ ಹಿಂದೂ ಆರ್ಚಕರನ್ನು ನೇಮಕ ಮಾಡಬೇಕೆಂದರು.

ಸರ್ಕಾರಕ್ಕೆ ದತ್ತಪೀಠ ವಿವಾದವನ್ನು ಜೀವಂತವಾಗಿ ಇಡಬೇಕೆಂಬ ಆಸೆಯಿಂದ ಈವರೆಗೂ ಹಿಂದೂ ಆರ್ಚಕರನ್ನು ನೇಮಕ ಮಾಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನರು ಆಪೇಕ್ಷೆಪಡುತ್ತಿದ್ದು, ಅದಕ್ಕಾಗಿಯೇ ಕಾಂಗ್ರೆಸ್‍ನವರು 78 ಸ್ಥಾನಗಳಿಗೆ ಇಳಿದಿದ್ದಾರೆ. ಸರ್ಕಾರವನ್ನು ಬೀಳಿಸುವ ಪ್ರಯತ್ನ ಬಿಜೆಪಿ ಮಾಡುವುದಿಲ್ಲ; ಸರ್ಕಾರವೇ ತನ್ನ ಆಂತರಿಕ ಕಿತ್ತಾಟದಿಂದ ಪತನವಾಗುತ್ತದೆ ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಯಾವುದೇ ಪ್ರಯತ್ನ ಮಾಡುವುದಿಲ್ಲ. ಒಂದು ವೇಳೆ ಆಂತರಿಕ ಬೇಗುದಿಯಿಂದ ಸರ್ಕಾರ ಪತನವಾದರೆ ನಾವು ಆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಕೈ ಕಟ್ಟಿ ಕೂರುವುದಿಲ್ಲ. ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ. ಸರ್ಕಾರದ ವಿರುದ್ಧ ಅವರದ್ದೇ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದಿನಕ್ಕೊಂದು ಬೆಳವಣಿಗೆ ನಡೆಯುತ್ತಿವೆ ಎಂದರು.

ರಾಜ್ಯದ ಜನ 122 ಶಾಸಕರಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇವಲ 79 ಮಂದಿಯನ್ನು ಮಾತ್ರ ಆಯ್ಕೆ ಮಾಡಿದ್ದಾರೆ. 39 ಮಂದಿ ಶಾಸಕರಿರುವ ಜೆಡಿಎಸ್‍ ಅನ್ನು ಮುಖ್ಯಮಂತ್ರಿಯಾಗಬೇಕೆಂದು ಜನ ಒಪ್ಪಿಲ್ಲ. 104 ಸ್ಥಾನವಿರುವ ಬಿಜೆಪಿ ಸರ್ಕಾರ ರಚಿಸಬೇಕೆಂಬುದು ಜನರ ಬಯಕೆಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರ ಜೊತೆ ಬಿಜೆಪಿ ನಾಯಕರು ಚರ್ಚೆ ಮಾಡಬಾರದು ಎಂಬ ನಿಯಮವಿಲ್ಲ. ಇಂಡಿಯಾ, ಪಾಕಿಸ್ತಾನದ ಜತೆ ಮಾತುಕತೆ ನಡೆಯುವಾಗ ಕೆಲವು ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಯುವುದು ದೊಡ್ಡದಲ್ಲ. ಜೆಡಿಎಸ್ ಸರ್ಕಾರದಲ್ಲಿ ಜನರಿಗೆ ಏನು ಬೇಕು ಎಂಬ ಚಿಂತನೆಗಿಂತಲೂ ನಮಗೆ ಏನು ಸಿಗುತ್ತದೆ ಎಂಬ ಸ್ವಾರ್ಥ ಹೆಚ್ಚಾಗಿದೆ. ಹೀಗಾಗಿ ರಾಜಕಾರಣ ಹದಗೆಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಾರದರ್ಶಕವಾಗಿ ವ್ಯವಹಾರ ನಡೆಸಿದ್ದರೆ ಡಿ.ಕೆ.ಶಿವಕುಮಾರ್ ಅವರಿಗೆ ಅನಗತ್ಯವಾದ ಭಯ ಏಕೆ, ಐಟಿ ಅಧಿಕಾರಿಗಳು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸಂಬಂಧಿತ ಟ್ಯಾಗ್ಗಳು

C.T.Ravi dattatreya peetha ಆಕ್ರೋಶ ಪಾಕಿಸ್ತಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ