‘ಶೀಘ್ರದಲ್ಲೇ ಅರಣ್ಯ ಇಲಾಖೆಯ 3085 ಹುದ್ದೆಗಳ ಭರ್ತಿ’

#forest minister  #indian forest survey

11-09-2018

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆಗಾಗಿ ವಿವಿಧ ಹಂತದ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರ ನೇಮಕ ಮಾಡಲು ತೀರ್ಮಾನಿಸಿದೆ ಎಂದು ಅರಣ್ಯ ಇಲಾಖೆ ಸಚಿವ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.

ಸರ್ಕಾರವು ಒಟ್ಟು 3,085 ವಿವಿಧ ದರ್ಜೆಯ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ್ದು, ಅವುಗಳನ್ನು 2019-20ನೇ ಸಾಲಿನಿಂದ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅದೇ ರೀತಿ, ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೋಸ್ಥೈರ್ಯ ಹೆಚ್ಚಿಸಲು ಪ್ರತಿ ವರ್ಷ ಅಸಮಾನ್ಯ ಸೇವೆ ಸಲ್ಲಿಸಿದವರಿಗೆ ಸರ್ಕಾರದಿಂದ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ವೇಳೆ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಮರಣ ಹೊಂದಿದರೆ, 20 ಲಕ್ಷ, ಶಾಶ್ವತ ಅಂಗವಿಕಲತೆಯಾದರೆ, 10 ಲಕ್ಷ ಹಾಗೂ ಗಂಭೀರ ಗಾಯ ಸ್ವರೂಪವಾದರೆ, 2 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಮತ್ತು 10 ಲಕ್ಷ ವಿಶೇಷ ಗುಂಪು ವಿಮಾ ಮೊತ್ತ ಪರಿಹಾರ ನೀಡಲಾಗುವುದು ಎಂದರು.

ಪ್ರಸ್ತುತ ಸಾಲಿನಲ್ಲಿ ದುರಾದೃಷ್ಟವಶಾತ್ ಮಾರ್ಚ್ 3ರಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಣಿನಂದನ್ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರಣ್ಯಕ್ಕೆ ಕಾಡ್ಗಿಚ್ಚು ಸಂಭವಿಸಿದ ವೇಳೆ ಪರಿಶೀಲನೆ ನಡೆಸುತ್ತಿದ್ದಾಗ ಏಕಾಏಕಿ ಕಾಡಿನ ಆನೆ ದಾಳಿ ನಡೆಸಿದಾಗ ಮರಣ ಹೊಂದಿದ್ದಾರೆ. ಅಲ್ಲದೆ, ಮಣಿನಂದನ್ ಅವರು ಅಪಾರ ಸೇವೆ ಸಲ್ಲಿಸಿದ್ದು, ಇವರಿಗೆ 'ಎಲಿಫೆಂಟ್ ವಾರಿಯರ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ತಿಳಿಸಿದರು.

ಇನ್ನು ಮೇ 26ರಂದು, ರಾಮನಗರ ವಿಭಾಗದ ಕ್ಷೇಮಾಭಿವೃದ್ಧಿ ನೌಕರ ಚಿಕ್ಕೀರಯ್ಯ, ಸಾತನೂರು ವಲಯದ ಯಡಮಾರನಹಳ್ಳಿಕೆರೆ ಹತ್ತಿರ ಇದ್ದ ಎಂಟು ಕಾಡಾನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಹಿಮ್ಮಟ್ಟಿಸುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದರು ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾವುದೆಂದು ಶಂಕರ್ ಹೇಳಿದರು.

ರಾಜ್ಯದಲ್ಲಿ 43,38,276 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಭೌಗೋಳಿಕ ಪ್ರದೇಶದ ಶೇಕಡ 22.62ರಷ್ಟು ಪ್ರದೇಶವು ಅರಣ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯಾಭಿವೃದ್ಧಿ ಮತ್ತು ಸಂರಕ್ಷಣೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಭಾರತೀಯ ಅರಣ್ಯ ಸಮೀಕ್ಷೆ ಪ್ರಕಾರ 2015-17ರ ಅವಧಿಯಲ್ಲಿ ರಾಜ್ಯದಲ್ಲಿನ ಅರಣ್ಯ ಮತ್ತು ಹೊದಿಕೆಯು 1,26,200 ಹೆಕ್ಟೇರ್ ನಷ್ಟು ಹೆಚ್ಚಾಗಿರುತ್ತದೆ. ಅಲ್ಲದೆ, ವನ್ಯಜೀವಿಗಳಾದ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆಯೂ ಅಧಿಕವಾಗಿದ್ದು, ವನ್ಯ ಜೀವಿ ಪ್ರಮಾಣದಲ್ಲಿ ಕರ್ನಾಟಕವೂ ಮೊದಲನೇ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ದವೆ, ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Forest R. Shankar ಅರಣ್ಯ ಸಮೀಕ್ಷೆ ಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ