ಸಮಗ್ರ ವಿದ್ಯಾರ್ಥಿವೇತನ ಪೋರ್ಟಲ್ ಲೋಕಾರ್ಪಣೆ

#Kumaraswamy  #scholarship # portal

05-09-2018

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನಗಳನ್ನು ಕ್ರಮಬದ್ಧವಾಗಿ ವಿತರಿಸಲು ಅನುಕೂಲವಾಗುವಂತೆ ಸಿದ್ಧಪಡಿಸಿರುವ ರಾಜ್ಯ ಸಮಗ್ರ ವಿದ್ಯಾರ್ಥಿವೇತನ ಪೋರ್ಟಲನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಲೋಕಾರ್ಪಣೆ ಮಾಡಿದರು.

ಈ ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿದ್ಯಾರ್ಥಿವೇತನವನ್ನು ವರ್ಗಾಯಿಸುವ ವ್ಯವಸ್ಥ ಕಲ್ಪಿಸಲಾಗಿದೆ. ರಾಜ್ಯದ ಅಭಿವೃದ್ಧಿ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಮೆಟ್ರಿಕ್-ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ. ಜತೆಗೆ ವಿದ್ಯಾರ್ಥಿವೇತನ ವಿತರಿಸುವಲ್ಲಿ ಆಗುತ್ತಿದ್ದವಿಳಂಬ ತಪ್ಪಲಿದೆ.

ಈವರೆವಿಗೂ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿದ್ಯಾರ್ಥಿವೇತನ ವಿತರಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ಹೊಂದಿದ್ದು,  ವಿದ್ಯಾರ್ಥಿಗಳ ಪರವಾಗಿ ಶಾಲಾ ಶಿಕ್ಷಕರು ಇಲಾಖಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಪೂರಕ ದಾಖಲೆಗಳ ಪ್ರತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕು ಕಛೇರಿಗಳಲ್ಲಿ ಸಲ್ಲಿಸಬೇಕಿತ್ತು. ಇಲಾಖಾ ಅಧಿಕಾರಿಗಳು ಅರ್ಜಿಗಳನ್ನು ಪೂರಕ ದಾಖಲೆಗಳೊಂದಿಗೆ ಪರಿಶೀಲಿಸಿ ಮಂಜೂರಾತಿ ನೀಡುತ್ತಿದ್ದರು.

ಈ ವ್ಯವಸ್ಥೆಯಲ್ಲಿ ಏಕರೂಪತೆಯ ಕೊರತೆಯಿಂದ ಇಲಾಖೆಗಳ ನಡುವೆ ಸಮನ್ವಯ, ಮಾಹಿತಿ ಕ್ರೂಢೀಕರಣ ಕಠಿಣವಾಗಿತ್ತು. ಅರ್ಜಿಗಳ ಪರಿಶೀಲನೆ, ಯೋಜನಾಮಾರ್ಗದರ್ಶಿಗಳ ಅನುಷ್ಠಾನ,  ಅಡ್ಡಪರಿಶೀಲನೆ ನಿರ್ವಹಣೆಗಳಲ್ಲಿ ತೊಂದರೆಯಾಗುತ್ತಿತ್ತು. ಪ್ರತಿ ಅರ್ಜಿಯನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟುವಿಳಂಬವೂ ಆಗುತ್ತಿತ್ತು. ಬಹಳ ಮುಖ್ಯವಾಗಿ ವಿದ್ಯಾರ್ಥಿವೇತನಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುತ್ತಿರುವುದರಿಂದ ವಿದ್ಯಾರ್ಥಿವೇತನ ಮಂಜೂರಾತಿಯಲ್ಲಿ ತಪ್ಪುಮಾಹಿತಿಗಳನ್ನು ತಡೆಯಬಹುದಾಗಿದೆ.

ಇ-ಆಡಳಿತ ಇಲಾಖೆಯು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ರಾಜ್ಯ ಎನ್.ಐ.ಸಿ ಘಟಕದ ಸಹಯೋಗದೊಂದಿಗೆ ಈ ಏಕೀಕೃತ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

2017-18ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ 16.02 ಲಕ್ಷ ವಿದ್ಯಾರ್ಥಿಗಳಿಗೆ 62736 ಲಕ್ಷರೂ. ಮೊತ್ತದಷ್ಟುವಿದ್ಯಾರ್ಥಿವೇತನಗಳನ್ನುಪಾವತಿಸಲಾಗಿದೆ. ಈ ಪೈಕಿ 11.56 ಲಕ್ಷ ಪರಿಶಿಷ್ಟ ಜನಾಂಗದ ವಿದ್ಯಾರ್ಥಿಗಳಾಗಿದ್ದು, ಇವರಿಗೆ 47789 ಲಕ್ಷ ರೂ. ವಿದ್ಯಾರ್ಥಿ ವೇತನಪಾವತಿಸಲಾಗಿದೆ. ಪರಿಶಿಷ್ಟ ಜನಾಂಗದ 4,45,770  ವಿದ್ಯಾರ್ಥಿಗಳಿಗೆ 14947 ರೂ. ವಿದ್ಯಾರ್ಥಿವೇತನ ವಿತರಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy scholarship ಜನಾಂಗ ಇ-ಆಡಳಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಉಪಯುಕ್ತವಾಗಿದೆ
  • Umesh
  • Employee