ಸರ್ಕಾರ ಉರುಳಿಸಲು ಬಿಜೆಪಿ ಯತ್ನಿಸುತ್ತಿಲ್ಲ: ಬಿಎಸ್ವೈ

#yeddyurappa # government

05-09-2018

ಬೆಂಗಳೂರು: ಪ್ರತಿಪಕ್ಷ ನಾಯಕರನ್ನು ನಿಯಂತ್ರಿಸಲು ಐಟಿಯನ್ನು ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು ಇದೀಗ ಮೈತ್ರಿ ಸರ್ಕಾರ ಪತನಗೊಳಿಸಲು ಅದಾಯ ತೆರಿಗೆ ಇಲಾಖೆಯನ್ನು ಮತ್ತೊಮ್ಮೆ ಬಳಸಿಕೊಳ್ಳುತ್ತಿದ್ದಾರೆಯೇ?. ಹಾಗೆಂಬ ಆರೋಪ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕೇಳಿ ಬಂದಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಬಿಜೆಪಿ ನಾಯಕರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಐಟಿ ಚರ್ಚೆ ಬಿರುಸುಪಡೆದಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಆಗಾಗ ಭೇಟಿ ನೀಡುತ್ತಿರುವುದು ಈ ಆರೋಪಕ್ಕೆ ಪುಷ್ಠಿ ನೀಡುವಂತಾಗಿದೆ.

ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ನಿರ್ದೇಶಕ ಬಾಲಕೃಷ್ಣನ್ ಅವರನ್ನು ವಿಜಯೇಂದ್ರ ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಕೇಂದ್ರದ ತನ್ನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಉರಳಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ. ಆದರೆ ಇದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಐಟಿ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತರ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪವನ್ನು ಕುಮಾರಸ್ವಾಮಿ ಮಾಡಿದ ಬೆನ್ನಲ್ಲೇ ಬಿಜೆಪಿ ಮುಖಂಡರು ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.

ಸ್ವತಃ ಯಡಿಯೂರಪ್ಪ ಈ ಕುರಿತು ಪ್ರತಿಕ್ರಯಿಸಿ, ರಾಜ್ಯದ ಜನತೆ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿ ಯಾವುದೇ ಯತ್ನ ಮಾಡುತ್ತಿಲ್ಲ ಎಂದಿದ್ದಾರೆ. ಆದರೆ ಈ ಸರ್ಕಾರ ರಮೇಶ್ ಜಾರಕಿಹೊಳಿ ಕುಟುಂಬದ ಜಗಳದಿಂದ ಉರುಳುತ್ತದೆ ಎಂದು ಹೇಳಿ ಕಾಂಗ್ರೆಸ್‍ನ ಆಂತರಿಕ ಸಮಸ್ಯೆಗಳತ್ತ ಬೊಟ್ಟು ಮಾಡಿ ಚರ್ಚೆಯನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ಈ ನಡುವೆ ಕುಮಾರ ಸ್ವಾಮಿ ಅವರ ಆರೋಪವನ್ನು ಬಿ.ವೈ.ವಿಜಯೇಂದ್ರ ಸಹ ನಿರಾಕರಿಸಿದ್ದಾರೆ.  ಕುಮಾರಸ್ವಾಮಿ ಬಳಿಯೇ ಸರ್ಕಾರವಿದೆ, ಗುಪ್ತಚರ ಇಲಾಖೆಯೂ ಇದೆ. ಇಷ್ಟೆಲ್ಲಾ ಸೌಲಭ್ಯ ಅವರ ಬಳಿ ಇರುವಾಗ ತನಿಖೆ ನಡೆಸಿ ವಾಸ್ತವ ಸಂಗತಿ ಪತ್ತೆ ಮಾಡಲಿ. ಅದನ್ನು ಬಿಟ್ಟು ಕುಮಾರಸ್ವಾಮಿ ಬಾಲಿಶ ಹೇಳಿಕೆ ಕೊಡಬಾರದು. ಇಷ್ಟಕ್ಕೂ ಐಟಿ ಇಲಾಖೆಯಲ್ಲಿ ಬಾಲಕೃಷ್ಣನ್ ಎಂಬ ಅಧಿಕಾರಿ ಇದ್ದಾರೆ ಅನ್ನುವುದೇ ತಮಗೆ ಗೊತ್ತಿಲ್ಲ ಎಂದರು.

ಈ ಹಿಂದೆ ಐಟಿ ಇಲಾಖೆಯ ನಿರ್ದೇಶಕ ಬಾಲಕೃಷ್ಣನ್ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಚುನಾವಣೆಗೂ ಮುನ್ನ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಚುನಾವಣೆ ಮುಗಿಯುವವರೆಗೂ ಬಾಲಕೃಷ್ಣನ್ ಅವರನ್ನು ವರ್ಗಾವಣೆ ಮಾಡುವಂತೆ ಕೋರಿತ್ತು. ಬಾಲಕೃಷ್ಣನ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿಕೊಂಡು ದಾಳಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದೀಗ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರವನ್ನು ಉರಳಿಸಲು ಹೂಡುತ್ತಿರುವ ದಾಳಗಳು ನನಗೆ ಗೊತ್ತಿದೆ. ಎಲ್ಲದಕ್ಕೂ ಪುರಾವೆ ಕೊಡಲು ಸಾಧ್ಯವಿಲ್ಲ, ಆದರೆ ಆಧಾರವಿಲ್ಲದೇ ನಾನು ಆರೋಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa B.Y.vijayendra ಚುನಾವಣೆ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ