ಹೈಟೆಕ್ ಉಗಾಂಡ ಕಳ್ಳರ ಬಂಧನ

fake ATM and fraud: ugandan citizens arrest

05-09-2018

ಬೆಂಗಳೂರು: ಸಾಫ್ಟ್ ವೇರ್ ತಂತ್ರಜ್ಞಾನದ ಮೂಲಕ ನಕಲಿ ಎಟಿಎಂ ಕಾರ್ಡ್‍ಗಳನ್ನು ತಯಾರಿಸಿ ಗ್ರಾಹಕರ ದೋಚಿ ವಂಚನೆ ನಡೆಸುತ್ತಿದ್ದ ಐನಾತಿ ಉಗಾಂಡ ಗ್ಯಾಂಗ್‍ನ ಇಬ್ಬರನ್ನು ಕೊತ್ತನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಫ್ಟ್ ವೇರ್ ಮೂಲಕ ಡೇಟಾವನ್ನು ನಕಲಿ ಎಟಿಎಂ ಕಾರ್ಡ್‍ಗೆ ರವಾನಿಸಿ ಅದರಿಂದ ಎಟಿಎಂಗೆ ಹೋಗಿ ಗ್ರಾಹಕರ ಹಣವನ್ನು ದೋಚುತ್ತಿದ್ದ ಉಗಾಂಡ ಗ್ಯಾಂಗ್‍ನ ಜಿಂಜಾ ನಗರದ ಬಬಲಂಡಾ ಅಮೂನಾನ್ (25), ಕಂಪಾಲ ಮೂಲದ ಹೊಗಿಡೊ ಆಂಬ್ರೋಸ್ (22) ಬಂಧಿಸಿ ತಲೆಮರೆಸಿಕೊಂಡಿರುವ ಗ್ಯಾಂಗ್‍ನ ಮರಿಯಮ್ಮನ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಆರೋಪಿಗಳು ಎಟಿಎಂ ಕೇಂದ್ರಗಳಲ್ಲಿ ಎಟಿಎಂ ರೀಡ್ ಮಾಡುವ ಸ್ಕಿಮ್ಮರ್ ಮತ್ತು ಎಟಿಎಂ ಪಿನ್ ಕಾರ್ಡ್ ರೀಡ್ ಮಾಡುವ ಚಿಪ್ ಇರುವ ಮೈಕ್ರೋ ಕ್ಯಾಮೆರಾ ಪ್ಲೇಟ್ ಅಳವಡಿಸಿ ಅವುಗಳಿಂದ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಲ್ಯಾಪ್‍ ಟಾಪ್‍ಗೆ ಅಳವಡಿಸಿಕೊಂಡು ಸಾಫ್ಟ್ ವೇರ್ ನ ಮೂಲಕ ಡೇಟಾವನ್ನು ನಕಲಿ ಎಟಿಎಂ ಕಾರ್ಡ್‍ಗಳಿಗೆ ರವಾನಿಸಿ ವಂಚಿಸುತ್ತಿದ್ದರು.

ಬಂಧಿತರಿಂದ 2 ಲ್ಯಾಪ್‍ ಟಾಪ್‍ಗಳು, ಎಟಿಎಂ ಕಾರ್ಡ್ ಡೇಟಾವನ್ನು ನಕಲಿ ಎಟಿಎಂ ಕಾರ್ಡ್‍ಗೆ ವರ್ಗಾಯಿಸುವ ಎರಡು ಯಂತ್ರಗಳು, ಚಿಪ್, ಮೈಕ್ರೋ ಕ್ಯಾಮರಾ ಪ್ಲೇಟ್ ಮತ್ತು ಬ್ಯಾಟರಿಗಳು, ಡ್ಯಾಂಗಲ್‍ಗಳು, 9 ಮೊಬೈಲ್‍ಗಳು, ಪಿನ್ ನಂಬರ್ ಇರುವ 20 ಎಟಿಎಂ ಕಾರ್ಡ್‍ಗಳು, 60 ಖಾಲಿ ಕಾರ್ಡ್‍ಗಳು, 100 ಎಟಿಎಂ ಕಾರ್ಡ್ ಇರುವ ಬಂಡಲ್‍ಗಳು, 60 ಸಾವಿರ ರೂ. ನಗದು, ಡಿಯೊ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಬಬಲಂಡಾ ಹಾಗೂ ಆಂಬ್ರೋಸ್ ವಿದ್ಯಾರ್ಥಿ ವೀಸಾ ಮೇಲೆ ನಗರಕ್ಕೆ ಬಂದಿದ್ದರು. ಬಬಲಂಡಾ ಬಿ ಫಾರ್ಮಾ ಅರ್ಧಕ್ಕೆ ಮೊಟಕುಗೊಳಿಸಿ, ಕೆಂಪೇಗೌಡ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ. ಮತ್ತೊಬ್ಬ ಆರೋಪಿ ಆಂಬ್ರೋಸ್, ಸ್ಟೇಟ್ ಬ್ರಿಟಿಷ್ ಅಕಾಡೆಮಿಯಲ್ಲಿ ಬಿಸಿಎ ಅರ್ಧಕ್ಕೆ ನಿಲ್ಲಿಸಿ ಬಾಗಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇವರಿಬ್ಬರೂ ಬಾಗಲೂರಿನಲ್ಲಿ ಪರಿಚಯವಾಗಿದ್ದ ತಮ್ಮದೇ ದೇಶದ ಮರಿಯಮ್ಮನ ಜೊತೆ ಎಟಿಎಂ ಕಾರ್ಡ್ ತಯಾರಿಸಿ ಗ್ರಾಹಕರ ಹಣ ತೆಗೆದು ವಂಚಿಸುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದರು.

ಮೋಜಿಗಾಗಿ ಕೃತ್ಯ: ನಗರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಇನ್ನಿತರ ಕಡೆಗಳಲ್ಲಿ ನಕಲಿ ಎಟಿಎಂ ಕಾರ್ಡ್‍ಗಳಿಂದ 25 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿ ಮೋಸ ಮಾಡಿದ್ದು, 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಕೊತ್ತನೂರಿನಲ್ಲಿ ನಡೆದ ವಂಚನೆ ಪ್ರಕರಣದ ದೂರು ದಾಖಲಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಹರಿಯಪ್ಪ ಅವರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಳಿ ಇರುವ ವೀಸಾ, ಪಾರ್ಸ್‍ ಪೋರ್ಟ್ ಅವಧಿ ಮುಗಿದಿದ್ದು, ತಮ್ಮ ದೇಶಕ್ಕೆ ವಾಪಾಸ್ ಆಗದೆ ಇಲ್ಲೇ ಉಳಿದುಕೊಂಡು ಅಪರಾಧ ಕೃತ್ಯದಲ್ಲಿ ತೊಡಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

uganda visa ಬಿ ಫಾರ್ಮಾ ಎಟಿಎಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ