ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರ ಪ್ರತಿಭಟನೆ

hindu janajagruti organisation workers protest

05-09-2018

ಬೆಂಗಳೂರು: ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಿ ನಿಷೇಧ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಹಿಂದೂ ಪರ ಹೋರಾಟಗಾರರು, ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಬಂಧಿತರಿಗೆ ಹಿಂಸೆ ನೀಡಿರುವ ಎಸ್‍ಐಟಿ ಪೊಲೀಸರು ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಬರೆಯಿಸಿಕೊಂಡಿದ್ದಾರೆ. ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ಬಂಧಿತ 14 ಮಂದಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಆದರೆ ಅವರಲ್ಲಿ ಒಬ್ಬರೂ ಸನಾತನ ಅಥವಾ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರಲ್ಲ. ಆದರೂ ಈ ಸಂಘಟನೆಗಳ ಹೆಸರು ಎಳೆದು ತರಲಾಗುತ್ತಿದ್ದು, ಇದರ ಹಿಂದೆ ನಿಷೇಧ ಮಾಡುವ ಷಡ್ಯಂತ್ರ ಇದೆ. ಹಿಂದೂಗಳೆಲ್ಲರೂ ಇದರ ವಿರುದ್ಧ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಮೋಹನ್ ಗೌಡ, ಸೋ ಕಾಲ್ಡ್ ಬುದ್ಧಿಜೀವಿಗಳು ಸನಾತನ ಸಂಸ್ಥೆಯ ನಿಷೇಧಕ್ಕೆ ಅಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಸನಾತನ ಸಂಸ್ಥೆ ಅಧ್ಯಾತ್ಮ ಹಾಗೂ ಧರ್ಮ ರಕ್ಷಣೆಗಾಗಿ ಇರುವ ಸಂಸ್ಥೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕು ನಿಷೇಧ ಮಾಡಲು ಅವಕಾಶ ಕೊಡುವುದಿಲ್ಲ ಎಂದ ಅವರು, ಚಾರ್ಜ್ ಶೀಟ್ ಹಾಕದೆ, ಕೋಕಾ ಕಾಯ್ದೆ ಹಾಕಿದ್ದಾರೆ. ಇದು ಹಿಂದೂ ಹೋರಾಟಗಾರರನ್ನು ಬಂಧಿಸುವ ಸಂಚು ಎಂದು ಆರೋಪಿಸಿದರು.

ಮೈಸೂರಿನಲ್ಲಿ 8 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದ ಹಬೀಬ್ ಪಾಷಾ ಮೇಲೆ ಯಾಕೆ ಇವರು ಕೋಕಾ ಹಾಕಿಲ್ಲ. ಈ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಎನ್‍ಐಐ ತನಿಖೆ ಮಾಡಿ ಪಿಎಫ್‍ಐ ಕೈವಾಡ ಇದೆ ಎಂದಿತ್ತು. ಆದರೆ, ಆದರೆ ಸಂಸ್ಥೆಯನ್ನ ಇಲ್ಲಿಯವರೆಗೂ ಏಕೆ ನಿಷೇಧಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿದರೆ ಪ್ರಜಾಪ್ರಭುತ್ವದ ವಿಜಯ ಎಂದು ವ್ಯಾಖ್ಯಾನಿಸುವ ವಿಚಾರವಾದಿಗಳು, ಎಡಪಂಥೀಯರನ್ನು ಬಂಧಿಸಿದಾಗ ಪ್ರಜಾಪ್ರಭುತ್ವದ ವೈಫಲ್ಯ ಎನ್ನುತ್ತಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೇರೇಪಿಸುವವರ ವಿರುದ್ಧ ಮಾತನಾಡಿದರೆ ಅದನ್ನು ಕೋಮುವಾದ ಎನ್ನುತ್ತಾರೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

gauri Journalist ಚಟುವಟಿಕೆ ಪ್ರಜಾಪ್ರಭುತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ