ಆ ಕರಾಳ ಘಟನೆ ನಡೆದು ಇಂದಿಗೆ ಒಂದು ವರ್ಷ!

gauri murder: one year completed, final stage investigation

05-09-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಬುಧವಾರ(ಸೆ.5)ಕ್ಕೆ ಒಂದು ವರ್ಷ ಮುಗಿದಿದ್ದು, ಹತ್ಯೆ ಪ್ರಕರಣದ ಹಂತಕರ ಪತ್ತೆ ಅಂತಿಮ ಹಂತಕ್ಕೆ ಬಂದಿದೆ ಬರೋಬ್ಬರಿ ಒಂದು ವರ್ಷಗಳ ಕಾಲದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಯಶಸ್ಸು ಸಾಧಿಸಿರುವುದು ವಿಶೇಷ ತನಿಖಾ ತಂಡ(ಎಸ್ ಐಟಿ)ಅಧಿಕಾರಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಕಳೆದ 2017ರ ಸೆ.5 ರಂದು ರಾತ್ರಿ ರಾಜರಾಜೇಶ್ವರಿ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್‍ಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಕೃತ್ಯವು ಅಂದಿನ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಸವಾಲಿನ ಪ್ರಕರಣ ಆಗಿತ್ತು. ಇಡೀ ಚಿಂತಕರ ವಲಯವೇ ಈ ಪ್ರಕರಣದಿಂದ ಬೆಚ್ಚಿಬಿದ್ದಿದ್ದರು.

ಅತ್ಯಂತ ಗಂಭೀರವಾಗಿ ಕೃತ್ಯವನ್ನು ಪರಿಗಣಿಸಿದ್ದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‍ಐಟಿ)ಯನ್ನು ಐಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ರಚನೆ ಮಾಡಿತ್ತು. ತನಿಖಾಧಿಕಾರಿನ್ನಾಗಿ ಅಂದಿನ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ನೇಮಿಸಿ ತನಿಖೆ ಆರಂಭಿಸಲಾಗಿತ್ತು. ಬರೋಬ್ಬರಿ 150 ಮಂದಿ ಇದ್ದ ಖಾಕಿ ಪಡೆ ಗೌರಿ ಹಂತಕರಿಗೆ ಬಲೆ ಬೀಸಿದ್ದರು. ಆದರೆ, ಹತ್ಯೆ ನಡೆದು 3 ತಿಂಗಳು ಕಳೆದರೂ ಆರೋಪಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಬಂಧನ ವಿಳಂಬವಾದಂತೆ ಪ್ರತಿಭಟನೆಗಳು ನಡೆದವು ಒತ್ತಡ ಹೆಚ್ಚಾಯಿತು ಹಠಕ್ಕೆ ಬಿದ್ದ ಎಸ್‍ಐಟಿ ತಂಡ ಮಂಡ್ಯದಲ್ಲಿ ಬಲು ದೊಡ್ಡ ಬೇಟೆಯಾಡಿದ್ದರು. ಎಸ್‍ಐಟಿಯಿಂದ ಮೊದಲ ಬೇಟೆಯಾಡಿದ್ದು, ಮಂಡ್ಯದ ನವೀನ್ ಅಲಿಯಾಸ್ ಹೊಟ್ಟೆ ಮಂಜ. ಈತನ ಬಂಧನ ನಂತರ ತನಿಖೆ ಮತ್ತೆ ಚುರುಕಾಯಿತು. ನವೀನ್ ಪಿಸ್ತೂಲ್ ಡೀಲಿಂಗ್ ಮಾಡುತ್ತಿದ್ದ. ಹೊಟ್ಟೆ ಮಂಜನಿಂದ ಎಸ್‍ಐಟಿ ಹೆಚ್ಚಿನ ಮಾಹಿತಿಯನ್ನ ಕಲೆಹಾಕಿತು ಜೊತೆಗೆ ಇವನ ವಿರುದ್ಧ ಆರೋಪ ಪಟ್ಟಿಯನ್ನು ಸಹ ಕೋರ್ಟ್‍ಗೆ ಸಲ್ಲಿಸಿತ್ತು.

ಆರೋಪಿಯ ವಿಚಾರಣೆಯ ನಂತರ ಮತ್ತೆ 4ಮಂದಿಯನ್ನ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಅವರಲ್ಲಿ ಪ್ರವೀಣ್ ಕೊಟ್ಟ ಮಾಹಿತಿ ಈ ಇಡೀ ಗೌರಿ ಹತ್ಯೆಯ ವೃತ್ತಾಂತವನ್ನು ಬಿಚ್ಚಿಟ್ಟಿತ್ತು. ಏಕೆಂದರೆ ಎಸ್‍ಐಟಿ ಹುಡುಕುತ್ತಿದ್ದ ಆ ವ್ಯಕ್ತಿ ಸಿಕ್ಕಿದ್ದ. ಅವನೇ ಪರುಶುರಾಮ್ ವಾಘ್ಮೋರೆ. ವಿಜಯಪುರದಲ್ಲಿ ಸಿಕ್ಕಿಬಿದ್ದ ಗೌರಿ ಹಂತಕ ವಾಘ್ಮೋರೆಯೇ ಪ್ರಕರಣ ಪ್ರಮುಖ ಆರೋಪಿಯಾಗಿದ್ದ.

ಮಾಸ್ಟರ್ ಮೈಂಡ್ ಕಾಳೆ: ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಎನ್ನುವುದನ್ನು ವಾಘ್ಮೋರೆ ಒಪ್ಪಿಕೊಂಡಿದ್ದ. ಇಲ್ಲಿಂದ ವೇಗವಾಗಿ ತನಿಖೆ ನಡೆಸಿದ ಎಸ್‍ಐಟಿ ಪ್ರಕರಣವನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಿದೆ. ಪ್ರಕರಣದ ಸಂಬಂಧ ಇಲ್ಲಿಯವರೆಗೆ 13 ಜನರನ್ನ ಬಂಧಿಸಲಾಗಿದೆ. ಇಷ್ಟೆ ಅಲ್ಲ, ಒಂದು ಪ್ರಕರಣ ಮೂರು ಕೇಸ್‍ಗಳಿಗೆ ಮರುಜೀವ ಸಹ ಕೊಟ್ಟಿದೆ.

ಗೌರಿ ಹತ್ಯೆ ಪ್ರಕರಣ ಮುಗಿಯುತ್ತಾ ಬಂದಿದೆ. ಎಫ್‍ಎಸ್‍ಎಲ್ ಸಹ ಗೌರಿ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಓರ್ವ ಪ್ರಮುಖ ಆರೋಪಿಯ ಛಾಯೆಯನ್ನ ಹೊಂದುತ್ತಿದ್ದಾನೆ ಎಂದು ವರದಿ ನೀಡಿ ಧೃಡಪಡಿಸಿದೆ ಜೊತೆಗೆ ಈ ಕೇಸ್‍ನಲ್ಲಿ ಸಿಕ್ಕಿ ಬಿದ್ದಿರುವ ಗಣೇಶ್ ಮಿಸ್ಕಿನ್ ಬಾಯ್ಬಿಟ್ಟಿರುವ ಮಾಹಿತಿ ಮೇಲೆ ಈ ಹಿಂದೆ ನಡೆದಿದ್ದ ಮೂವರು ಚಿಂತಕರ ಹತ್ಯೆಯಲ್ಲಿ ಇವರ ಕೈವಾಡವಿರುವುದು ಪತ್ತೆಯಾಗಿದೆ.

ಹೀಗಾಗಿ ಗೌರಿ ಕೇಸ್‍ನಿಂದ ಈ ಹಿಂದೆ ನಡೆದ ಕೇಸ್‍ಗಳಿಗೂ ಸಹ ಮುಕ್ತಿ ಸಿಗುವ ಕೆಲಸ ನಡೆದಿದೆ. ಇದು ಎಸ್‍ಐಟಿ ತನಿಖೆಯಲ್ಲಾದ ಪ್ರಗತಿ ಬಗ್ಗೆ ಪ್ರಗತಿಪರರು ಖುಷಿ ಪಡುವ ಸಂಗತಿ.


ಸಂಬಂಧಿತ ಟ್ಯಾಗ್ಗಳು

Gauri Lankesh SIT ಎಫ್‍ಎಸ್‍ಎಲ್ ವರದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ