ಯುರೋಪ್ ಪ್ರವಾಸಕ್ಕೆ ತೆರಳಿದ ಸಿದ್ದರಾಮಯ್ಯ

siddaramaiah

03-09-2018

ಬೆಂಗಳೂರು: ವಿದೇಶ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ ಅವರಿಗೆ ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶುಭ ಕೋರಿದರು. ಇಂದು ಬೆಳಿಗ್ಗೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುರೋಪ್ ಗೆ ಸಿದ್ದರಾಮಯ್ಯ ತೆರಳಿದರು. ಪಕ್ಷದ ಕಾರ್ಯಕರ್ತರು, ಮುಖಂಡರು ಸಿದ್ದರಾಮಯ್ಯ ಅವರನ್ನು ನಿವಾಸದ ಮುಂಭಾಗ ಬೀಳ್ಕೊಟ್ಟರು.

ನಿವಾಸದಿಂದ ಇಂದು ಬೆಳಿಗ್ಗೆ ಸೂಟು ಬೂಟು ಧರಿಸಿ ಹೊರಟುನಿಂತ ಸಿದ್ದರಾಮಯ್ಯ ಅವರನ್ನು ಅವರ ಅಭಿಮಾನಿಗಳು ಕೆಲ ಕಾಂಗ್ರೆಸ್ ಮುಖಂಡರುಗಳು ಬೀಳ್ಕೊಟ್ಟರು. ಹೊರಟುನಿಂತ ಸಿದ್ದರಾಮಯ್ಯ ಅವರ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮುಗಿಬಿದ್ದದ್ದು ಕಂಡುಬಂತು. ಕೆಲ ಕಾಂಗ್ರೆಸ್ ನಾಯಕರು ಹೂಗುಚ್ಛ ನೀಡಿ ಸಿದ್ದರಾಮಯ್ಯ ಅವರ ಪ್ರವಾಸಕ್ಕೆ ಶುಭ ಕೋರಿದರು. ನಗುಮೊಗದಿಂದಲೇ ಎಲ್ಲರ ಶುಭಾಶಯ ಸ್ವೀಕರಿಸಿ ಸಿದ್ದರಾಮಯ್ಯ ವಾಹನವೇರಿ ಏರ್ಪೋರ್ಟ್ ಕಡೆ ತೆರಳಿದರು.

ಸಿದ್ದರಾಮಯ್ಯ ಇಂದಿನಿಂದ ವಿದೇಶ ಪ್ರವಾಸ ಕೈಗೊಂಡಿದ್ದು ಸೆ.15ಕ್ಕೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ತದನಂತರ ಎರಡು ದಿನದ ವಿಶ್ರಾಂತಿ ಪಡೆದು ದಿಲ್ಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡಿ ನಿಗಮ ಮಂಡಳಿಗೆ ಅಧ್ಯಕ್ಷರ ಉಪಾಧ್ಯಕ್ಷರ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಮಾಲೋಚಿಸಲಿದ್ದಾರೆ.

ಅದಾಗಲೇ ನಿಗದಿಯಾಗಿರುವಂತೆ ಸೆಪ್ಟೆಂಬರ್ 3ನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ. ಸಧ್ಯ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ಹೆಚ್ಚಾಗಿದ್ದು, ಕೆಲವರು ಯೂರೋಪಿಗೆ ತೆರಳಿ ಲಾಬಿ ಮುಂದುವರಿಸುವ ಸಾಧ್ಯತೆ ಇದೆ. ಇದು ಸಿದ್ದರಾಮಯ್ಯನವರ ಖಾಸಗಿ ಪ್ರವಾಸವಾಗಿದ್ದು ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಆದರೂ ಆಕಾಂಕ್ಷಿಗಳು ತಮ್ಮ ಅಹವಾಲನ್ನು ಹೊತ್ತು ಯುರೋಪ್ ಗೆ ತೆರಳಿ ಲಾಬಿ ನಡೆಸುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

Siddaramaiah Europe ಅಧ್ಯಕ್ಷ ಅಹವಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ