ಕುಖ್ಯಾತ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯಿಗೆ ಗುಂಡೇಟು!

police shootout on Rowdy suhail aliyas papaya

03-09-2018

ಬೆಂಗಳೂರು: ಪೊಲೀಸರ ಮೇಲೆ ತಿರುಗಿಬಿದ್ದು ಪರಾರಿಯಾಗಲು ಯತ್ನಿಸುವ ರೌಡಿಗಳು ಮತ್ತು ಕಳ್ಳರ ಮೇಲೆ ಪೊಲೀಸರ ಗುಂಡಿನ ದಾಳಿ ಮುಂದುವರೆದಿದ್ದು, ಸಬ್‍ ಇನ್ಸ್ಪೆಕ್ಟರ್ ಹಾಗೂ ಮುಖ್ಯಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಒಡಿ ಹೋಗುತ್ತಿದ್ದ ಕುಖ್ಯಾತ ಕಳ್ಳ ರಾಬರಿ ಸುಹೇಲ್ ಅಲಿಯಾಸ್ ಪಪ್ಪಾಯಿ ಎಂಬಾತನ ಎರಡು ಕಾಲಿಗೆ ಬಾಣಸವಾಡಿ ಪೊಲೀಸರು ಗುಂಡು ಹೊಡೆದು ತಕ್ಕ ಶಾಸ್ತಿ ಮಾಡಿದ್ದಾರೆ.

ಗ್ಯಾಂಗ್ ಕಟ್ಟಿಕೊಂಡು ಕಳ್ಳತನ,ಸುಲಿಗೆ ಹಲ್ಲೆ ದರೋಡೆ ಮಾಡುತ್ತಾ ಪೊಲೀಸರಿಗೆ ತಲೆ ನೋವಾಗಿ ಪರಿಗಣಿಸಿದ್ದ ಡಿಜೆಹಳ್ಳಿಯ ಮೋದಿನಗರದ ಕಳ್ಳ ಸುಹೇಲ್(22)ಎರಡು ಕಾಲುಗಳಿಗೂ ಗುಂಡೇಟು ತಿಂದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಹೇಲ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಬಾಣಸವಾಡಿ ಠಾಣೆಯ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫಿಕ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ವಿವರ: ಕಳೆದ ಸೆ.1ರಂದು ರಾಮಮೂರ್ತಿನಗರ, ಬಾಣಸವಾಡಿ, ಸದಾಶಿವನಗರ, ಸಂಜಯನಗರ ಸೇರಿ 4 ಕಡೆಗಳಲ್ಲಿ ನಡೆದಿದ್ದ ಸರ ಅಪಹರಣ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಪತ್ತೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ಅದರಲ್ಲಿ ಬಾಣಸವಾಡಿ ಪೊಲೀಸ್ ಇನ್ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದ ತಂಡ ಆರೋಪಿಗಳ ಪತ್ತೆ ನಡೆಸುತ್ತಿದ್ದಾಗ ಭಾನುವಾರ ಮಧ್ಯರಾತ್ರಿ 1.45ರ ವೇಳೆ ಸುಹೇಲ್ ಇಬ್ಬರು ಸಹಚರರೊಂದಿಗೆ ಬಾಣಸವಾಡಿ ಅಗ್ನಿಶಾಮಕದಳ ಸ್ಟೇಷನ್ ರಸ್ತೆಯಲ್ಲಿರುವ ಮಾಹಿತಿ ಬಂದಿದೆ.

ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ಇನ್ಸ್ಪೆಕ್ಟರ್ ಮುನಿಕೃಷ್ಣ ಕಾರ್ಯಾಚರಣೆ ಕೈಗೊಂಡಾಗ ಮುಂಜಾನೆ ಅಗ್ನಿಶಾಮಕದಳ ಸ್ಟೇಷನ್ ರಸ್ತೆಯಲ್ಲಿರುವ ಡಿಯೋ ಸ್ಕೂಟರ್ ನಲ್ಲಿದ್ದ ಸುಹೇಲ್‍ನ ಇಬ್ಬರು ಸಹಚರರಿಬ್ಬರು ಇರುವುದು ಗೊತ್ತಾಯಿತು, ತಕ್ಷಣವೇ ಅಲ್ಲಿಗೆ ತೆರಳಿದ ಇಬ್ಬರು ಪೊಲೀಸ್ ಜೀಪ್ ನೋಡಿ ಕತ್ತಲಲ್ಲಿ ಪರಾರಿಯಾದರು.

ಅವರನ್ನು ಬೆನ್ನಟ್ಟುವ ವೇಳೆ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ ಸುಹೇಲ್‍ನನ್ನು ಹಿಡಿದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಹೋದ ಸಬ್‍ ಇನ್ಸ್ಪೆಕ್ಟರ್  ಶರತ್ ಹಾಗೂ ಮುಖ್ಯಪೇದೆ ರಫಿಕ್ ಮೇಲೆ  ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಕೂಡಲೇ ಇನ್ಸ್ಪೆಕ್ಟರ್ ಮುನಿಕೃಷ್ಣ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಮತ್ತೆ ಎರಡು ಸುತ್ತು ಗುಂಡು ಹಾರಿಸಿದ್ದು ಅವೆರಡು ಸುಹೇಲ್‍ನ ಎರಡು ಕಾಲುಗಳಿಗೆ ತಗುಲಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ. ಗಾಯಗೊಂಡ ಸುಹೇಲ್‍ ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗುಣಮುಖನಾದ ನಂತರ ಆತನನ್ನು ಬಂಧಿಸಿ ವಿಚಾರಣೆ ನಡೆಸಿ ಸಹಚರರ ಬಂಧನಕ್ಕೆ ಬಲೆ ಬೀಸಲಾಗುವುದು. ಸುಹೇಲ್ ಮಾರಕಾಸ್ತ್ರದಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಸಬ್‍ ಇನ್ಸ್ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫಿಕ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy shoot out ಮಾರಕಾಸ್ತ್ರ ಮುಖ್ಯಪೇದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ