18 ಬೈಕ್ ಗಳನ್ನು ಕದ್ದಿದ್ದವನ ಬಂಧನ

18 bike stolen: police arrested accused

03-09-2018

ಬೆಂಗಳೂರು: ಮನೆಗಳ ಮುಂಭಾಗ ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡಿ , ಸ್ನೇಹಿತರ ಮೂಲಕ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಖತರ್ನಾಕ್ ಸ್ಕೂಟರ್ ಕಳ್ಳ ಆರ್.ಟಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಗಂಗಾನಗರದ ಉಮಾಶಂಕರ್ ಅಲಿಯಾಸ್ ಶಿರಾಫ್ (41) ಬಂಧಿತ ಕಳ್ಳನಾಗಿದ್ದು, ಈತ ನಕಲಿ ಕೀ ಬಳಸಿ ಕಳವು ಮಾಡಿದ್ದ 10 ಲಕ್ಷ 91 ಸಾವಿರ ರೂ. ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ. ಆರೋಪಿಯ ಬಂಧನದಿಂದ ಆರ್.ಟಿ.ನಗರದ 7, ಮಹಾಲಕ್ಷ್ಮಿಲೇಔಟ್‍ನ 3, ಸುಬ್ರಮಣ್ಯನಗರದ 5, ವಿಜಯನಗರ, ಸಂಜಯ್ ನಗರ ಮತ್ತು ಅನ್ನಪೂರ್ಣೇಶ್ವರಿ ನಗರದ ತಲಾ 1 ಸೇರಿ 18 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 14 ಪ್ರಕರಣಗಳಲ್ಲಿ ವಾರಸುದಾರರು ಪತ್ತೆಯಾಗಬೇಕಾಗಿದೆ.

ಆಂಧ್ರದಲ್ಲಿ ಮಾರಾಟ: ಮೊದಲು ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ನಂತರ ಬಿಗ್ ಬಜಾರ್‍ ನಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಆರೋಪಿಯು ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುವುದರಲ್ಲಿ ಪರಿಣಿತಿ ಪಡೆದು ಕೃತ್ಯ ನಡೆಸುತ್ತಿದ್ದ.

ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಸ್ನೇಹಿತರ ಮೂಲಕ ಮಾರಾಟ ಮಾಡುತ್ತಿದ್ದನಲ್ಲದೆ, ನೆರೆಯ ಆಂಧ್ರಪ್ರದೇಶದಲ್ಲೂ ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಮೋಜು ಮಾಡುತ್ತಿದ್ದನು. ಕಳೆದ ಆಗಸ್ಟ್ 22 ರಂದು ಮಧ್ಯಾಹ್ನ ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ತರಬೇತಿಗೆ ಹೋಗುವಾಗ ಸುಜಾತ ಎನ್ನುವವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು.

ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಅಜಯ್ ಸಾರಥಿ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike Andhra pradesh ವಾಹನ ಸ್ನೇಹಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ