ಸರ್ಕಾರದ ಸಾರ್ವಧಿಕಾರದ ಧೋರಣೆ ಖಂಡನೀಯ !

Kannada News

01-06-2017

ಬೆಂಗಳೂರು:- ಬಯಲು ಸೀಮೆಯ ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ಬೈಕ್ ರ್ಯಾಲಿ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬಯಲು ಪ್ರದೇಶದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ರ್ಯಾಲಿಯನ್ನು ಕೈಬಿಟ್ಟು ದೇವನಹಳ್ಳಿಯ ಬಳಿಯೇ ಪ್ರತಿಭಟನೆ ನಡೆಸಿ ಶೀಘ್ರ ನೀರಾವರಿ ಸೌಲಭ್ಯ ಕಲ್ಪಿ ಸುವಂತೆ ಆಗ್ರಹಿಸಿದರು. ಬೈಕ್ ರ್ಯಾಲಿ ಮೂಲಕ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಹೋರಾಟಗಾರರು ಮತ್ತು ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು  ಬಂಧಿಸಿ ರ್ಯಾಲಿಗೆ ಹೊರಟವರನ್ನು ದೇವನಹಳ್ಳಿ ರಾಣಿ ಕ್ರಾಸ್‍ವರೆಗೂ ಬರಲು ಅನುವು ಮಾಡಿಕೊಟ್ಟಿದ್ದರು. ರೈತ ಸಂಘದ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿಗಾಗಿ ವಿಧಾನಸೌಧಕ್ಕೆ ಬೈಕ್ ರ್ಯಾಲಿಗೆ ಮುಂದಾಗಿದ್ದ ರೈತರನ್ನು ಜಿಲ್ಲೆಯ ವಿವಿಧ ಕಡೆ ಪೊಲೀಸರು ಬಂಧಿಸಿ ಮುನ್ನೆಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದನ್ನು ರೈತ ಮುಖಂಡರು ತೀವ್ರವಾಗಿ ಖಂಡಿಸಿದ್ದು ಪ್ರಜಾ ಪ್ರಭತ್ವದ ವ್ಯವಸ್ಥೆಯ ರೀತಿಯಲ್ಲಿ ನ್ಯಾಯಯುತವಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ನೀರಿನ ಬೇಡಿಕೆಗೆ ಆಗ್ರಹಿಸುತ್ತಿದ್ದೇವೆ ಎಂದರು. ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಒಂದೂವರೆ ದಶಕಗಳ ಕಾಲದಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ ವಹಿಸಿದೆ. ಇದರ ವಿರುದ್ದ ಪ್ರತಿಭಟನೆ ನಡೆಸಲು ಮುಂದಾದ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ. ರೈತರನ್ನು ಬಂಧಿಸಲು ಮುಂದಾಗಿರುವ ಸರ್ಕಾರದ ಸಾರ್ವಧಿಕಾರದ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕಕರ್ ಮೊಕ್ಕಾಂ ಹೂಡಿದ್ದರು. ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೆಲ್ಲ ಒಂದುಗೂಡಿ ದೇವನಹಳ್ಳಿ ಮುಖಾಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದನ್ನು ವಿಫಲಗೊಳಿಸಲಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ