ಮತ್ತೆ ಪ್ರಕೃತಿ ಮುನಿಯುವ ಮುನ್ನ ಪ್ರವಾಸೋದ್ಯಮ ನಿಯಂತ್ರಕ್ಕೆ ಬರಲಿ

#Kodagu

01-09-2018

ಮಡಿಕೇರಿ: ಯಾವುದೇ ದೇಶವಿರಲಿ ರಾಜ್ಯವಿರಲಿ, ಪ್ರವಾಸೋದ್ಯಮ ಎನ್ನುವುದು ಒಂದು ಸುಂದರವಾದ ಹಾಗೂ ಆದಾಯತರುವ ಮತ್ತು ಉದ್ಯೋಗ ಸೃಷ್ಟಿ ಮಾಡುವ ಉದ್ಯಮ. ಇದರಲ್ಲಿ  ಬೇರೆ ಮಾತಿಲ್ಲ. ಪ್ರವಾಸೋದ್ಯಮ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಪರಿಕಲ್ಪನೆ ಮತ್ತು ವೈವಿಧ್ಯ ಮತ್ತು ಅಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಮತ್ತು ವ್ಯಾಪಾರಕ್ಕನುಗುಣವಾಗಿ ಇದೆ. ಅದು ಬೇರೆಯೇ ಚಿಂತನೆ.

ಕೊಡಗಿನಲ್ಲಿ ಪ್ರಕೃತಿ ಕೈಕೊಟ್ಟು ಇಲ್ಲಿನ ಕಾಫಿ, ಏಲಕ್ಕಿ, ಮೆಣಸು ಮುಂತಾದ ಎಲ್ಲಾ ಬೆಳೆಗಳು  ಜೀವನಾಧಾರವಾಗದಿದ್ದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೊಡಗಿನಲ್ಲಿ ಹೋಮ್ ಸ್ಟೇಗಳು ಮತ್ತು ಇತರ ಪ್ರವಾಸಿಗರನ್ನು ಆಕರ್ಷಿಸುವ ವ್ಯಾಪಾರ ವಹಿವಾಟು ಹುಟ್ಟಿಕೊಂಡವು. ನಗರಗಳಲ್ಲಿನ ಜನ ನೆಮ್ಮದಿ ಬಯಸಿ ಕೊಡಗಿಗೆ ಬಂದು ಇಲ್ಲಿನ ಮನೆಗಳಲ್ಲಿ ಅತಿಥಿಗಳಾಗಿ ಉಳಿದುಕೊಂಡು ಆ ಮನೆಯವರಿಗಷ್ಟು ಶುಲ್ಕ ನೀಡುವುದು ಕ್ರಮ. ಇದರಿಂದ  ಆ ಕೃಷಿಕರಿಗೊಂದಷ್ಟು ವರಮಾನ ಬರತೊಡಗಿತು.

ಎಲ್ಲ ಕಡೆ ಆದಂತೆ ಇದೂ ಕೂಡ ನಿಧಾನವಾಗಿ ವಾಣಿಜ್ಯೀಕರಣ ಗೊಂಡಿತು. ಕೊಡಗಿನ ಹೋಮ್ ಸ್ಟೇಗಳು ಐಷರಾಮಿ ತಾಣಗಳಾಗಿ ಪರಿವರ್ತನೆಯಾಗತೊಡಗಿದವು. ಹೆಸರಿಗೆಷ್ಟೇ ಇಲ್ಲಿ ಮದ್ಯಕ್ಕೆ ಅವಕಾಶವಿಲ್ಲ. ಆದರೆ ಅದಿಲ್ಲದ ಹೋಮ್ ಸ್ಟೇಗಳ ಅಸ್ತಿತ್ವವೇ ಇಲ್ಲವೆಂಬಂತಾಯಿತು. ಬರುವವರು  ಯಾರು ಎಲ್ಲಿಂದ ಬರುತ್ತಾರೆ ಎಂಬ ವಿಷಯ ಹಿಂದೆ ಸರಿಯಿತು. ಹಣವೊಂದೇ ಮುಖ್ಯವಾಯಿತು. ಇಲ್ಲಿ ಪಾರ್ಟಿಗಳು ವ್ಯವಸ್ಥೆಯಾಗತೊಡಗಿದವು. ಮೊದಲು ಹೊಸ ವರ್ಷದಲ್ಲಿ ಮಾತ್ರ ನಡೆಯುತ್ತಿದ್ದ ಇವು ಪದೇ ಪದೇ ನಡೆಯತೊಡಗಿದವು. ರಾತ್ರಿ ಇಡೀ ಐದು ಕಿ.ಮೀ ದೂರದವರೆಗೆ ಕೇಳುವಂತೆ ಸಂಗೀತದ ಪರಮ ಅಟ್ಟಹಾಸ,  ಸುತ್ತಲಿನ ಪ್ರಾಣಿಗಳು ಓಡುವಂತೆ, ಜನರು ನಿದ್ದೆಮಾಡದಂತೆ ಮಾಡಿದವು. ಪೊಲೀಸರಿಗೆ ದೂರು ನೀಡಿದವರಿಗೆ ರಕ್ಷಣೆಯ ಬದಲಿಗೆ ರೆಸಾರ್ಟು ಮಾಲಿಕರಿಂದ ಬೆದರಿಕೆ ಬಂತು. ಅಲ್ಲಿಗೆ ಧ್ವನಿ ಎತ್ತುತಿದ್ದ ಸಾರ್ವಜನಿಕರು ತಣ್ಣಗಾದರು .

ಗುಡ್ಡಗಳ ಮೇಲೆಲ್ಲಾ ರಸ್ತೆಗಳನ್ನು ಕಡಿದರು. ಅರಣ್ಯದಂಚಿನಲ್ಲೇ ಸರ್ಕಾರಿ ಭೂಮಿ ಅತಿಕ್ರಮಿಸಿ ಕುಳಿತರು. ವ್ಯೂ ಪಾಯಿಂಟ್ ಗಳಲ್ಲಿ ಹೋಂ ಸ್ಟೇ, ಕೆರೆಗಳು ಹುಟ್ಟಿಕೊಂಡವು, ಕಾಂಕ್ರೀಟ್ ರಸ್ತೆಗಳ ನಿರ್ಮಾಣವಾದವು.

ಇನ್ನು ಹೊಳೆ ಹಳ್ಳಗಳು, ಗುಡ್ಡಗಳು, ಕಾಡಿನ ಮಧ್ಯೆ ಮತ್ತು ರಸ್ತೆಗಳ ಬದಿಯಲ್ಲಿ ಸಿಕ್ಕ ಸಿಕ್ಕಲ್ಲಿ ತಮ್ಮ ಕಾರಿನ ಡಿಕ್ಕಿಯಲ್ಲಿ ತಂದು ಪ್ಲಾಸ್ಟಿಕ್ ಚೀಲಗಳಿಂದ ತುಂಬಿದ ಮಧ್ಯದ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯಲಾಯಿತು.

ಹಣದ ಲೆಕ್ಕಾಚಾರವೇ ಇಲ್ಲದಂತೆ ಮೋಜು ಪ್ರಾರಂಭವಾಯಿತು. ಜೊತೆ ಜೊತೆಯಾಗಿ ಬರುವ ಯುವಕ ಯುವತಿಯರು ಯಾರು ಏನು ಎಂದು ಕೇಳದಿರುವುದೇ ಹೆಚ್ಚು. ಇರಲಿ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ, ಅದರಿಂದ ಅಪರಿಚಿತ ಶವವಾಗಿ ಬೀಳುತ್ತಿರುವ ಯುವತಿಯರ ಸಂಖ್ಯೆಯೂ ಏರತೊಡಗಿತು.

ಐದು ವರ್ಷದ ಹಿಂದೆ ಹೋಮ್ ಸ್ಟೇಯೊಂದನ್ನು ಮಾಡಿದ್ದ ವ್ಯಕ್ತಿಯೊಬ್ಬರು ದಿನವೊಂದಕ್ಕೆ  ವ್ಯಕ್ತಿಯೊಬ್ಬರಿಗೆ ಐದು ನೂರು ರೂ ಶುಲ್ಕ ನಿಗದಿ ಮಾಡಿ ಸರಳವಾದ ವ್ಯವಸ್ಥೆ ಮಾಡಿದ್ದರು. ಎರಡು ವರ್ಷವಾದರೂ ಅವರಿಗೆ ವ್ಯಾಪಾರ ಕುದುರಲಿಲ್ಲ. ಈಗ  ಅವರು, “ಪುಲ್ ಬಿಜಿ” ಯಾಕೆಂದರೆ ಶುಲ್ಕ ತಲಾ ಎರಡೂವರೆ ಸಾವಿರ ಮಾಡಿದ್ದಾರೆ. ಅತಿಥಿಗಳಿಗೆ ಬೇಕಾದ್ದು ಸಿಗುವ ವ್ಯವಸ್ಥೆ ಮಾಡಿದ್ದಾರೆ. ಹಲವು ಕಡೆ ದುಡ್ಡಿನ ಆಸೆಗೆ ಬಿದ್ದ ಹೋಂ ಸ್ಟೇ ಮಾಲೀಕರು ಶೃಂಗಾರಲೀಲೆಯನ್ನು ಅತಿಥಿಗಳಿಗೆ  ಮಾಡಿ ಪೊಲೀಸ್ ಅತಿಥಿತಿ ಗಳಾಗಿರುವುದು ಹೊಸದೇನಲ್ಲ.

ಇದರೊಂದಿಗೆ ಈ ಮೋಜಿನೊಂದಿಗೆ ಸ್ಥಳೀಯವಾಗಿಯೂ ಅನೇಕ ಬದಲಾವಣೆಗಳಾಗಿವೆ. ಅನೇಕ ಸ್ಥಳೀಯ ಯುವಕರು ಈ ಅತಿಥಿಗಳನ್ನು ಅನುಕರಿಸ ತೊಡಗಿದ್ದಾರೆ. ಹೇಗಾದರೂ ಸಂಪಾದಿಸು ಮಜಾ ಮಾಡು ಎಂಬ ಸೂತ್ರಕ್ಕೆ ವಾಲುತ್ತಿದ್ದಾರೆ. ಸ್ಥಳೀಯ ಅಂಗಡಿಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆದಿದೆ. ಗಾಂಜಾ ಬೇಕಾದಂತೆ ಸಿಗುತ್ತಿದೆ. ಕೆಲವು ಮನೆಗಳಲ್ಲಿ ಗಾಂಜಾ ವ್ಯಸನಿಗಳಾದ ಯುವಕರು ದುಡ್ಡಿಗಾಗಿ ಮನೆಯವರೊಂದಿಗೆ ಜಗಳ ಮಾಡುವುದು ಹೊಡೆದಾಡುವುದು ನಿತ್ಯ ವಿಧಿಯಾಗಿದೆ. ನೂರಕ್ಕೆ ನೂರು ಹೋಮ್ ಸ್ಟೇ ಗಳು ಹೀಗಿವೆ ಎಂದಲ್ಲ. ಕೆಲವರು ಪರಿಸರ ಕಾಳಜಿಯಿಂದ ಯಾವುದೇ ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ನಗಣ್ಯವೆಂಬಷ್ಟು ಸತ್ಯ .

ಈಗ ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರ ಮೇಲ್ಪಟ್ಟು ರೆಸಾರ್ಟ್/ ಹೋಮ್ ಸ್ಟೇಗಳಿವೆ. ಇದರಿಂದಾಗಿ ನೇರವಾಗಿ ನಾಲ್ಕೈದು ಸಾವಿರ ಜನರಿಗೆ ಮತ್ತು ಪರೋಕ್ಷವಾಗಿ ಅಷ್ಟೇ ಜನರಿಗೆ ಉದ್ಯೋಗ ದೊರೆತಿದೆ. ಒಂದು ಜಿಲ್ಲೆಯಲ್ಲಿ ಸಾವಿರ ಜನರಿಗೆ ಉದ್ಯೋಗ ನಿರ್ಮಾಣ ಸಣ್ಣ ಸಂಗತಿಯಲ್ಲ ಇದು ಇನ್ನೂ ಹೆಚ್ಚಾಗಬಹುದು.

ರೆಸಾರ್ಟುಗಳವರಿಗೆ ತೊಂದರೆ ಕೊಡಬೇಡಿ ಪ್ರವಾಸೋದ್ಯಮ ಬೆಳೆಯಲಿ ಎಂದು ಜಿಲ್ಲಾಡಳಿತವೇ ತನ್ನ ಸಿಬ್ಬಂದಿಗೆ ಬಾಯಿ ಮಾತಿನ ನಿರ್ದೇಶನ ನೀಡುತ್ತದೆ. ಈಗಂತೂ ಹೆಚ್ಚಿನ ರೆಸಾರ್ಟುಗಳ ಮಾಲೀಕರು ಇಲ್ಲವೇ ಪಾಲುದಾರರು, ಬೆಂಗಳೂರಿನ ಭಾರಿಕುಳಗಳು, ರಾಜಕಾರಣಿಗಳು, ಇಲ್ಲವೇ ದೊಡ್ಡ ಅಧಿಕಾರಿಗಳು ರೆಸಾರ್ಟು ಹೋಮ್ ಸ್ಟೇ ಗಳಿರುವ  ಪ್ರದೇಶದಲ್ಲಿ ಒಂದು ತಿಂಗಳು ವಾಸ ಮಾಡಿದರೆ ಇದರ ಸಂಪೂರ್ಣ ಚಿತ್ರಣ ದೊರೆಯುತ್ತದೆ. ಹೌದು ನಮಗೆ ಪ್ರವಾಸೋದ್ಯಮ ಬೇಕು, ಆದರೆ ಸರಿಯಾದ ನಿಯಂತ್ರಣ ಬೇಕು.. ಮಾಡುವವರು ಯಾರು? "ಬೆಕ್ಕಿಗೆ ಗಂಟೆ ಕಟ್ಟುವವರು ಯಾರು "

ವರದಿ: ಪಪ್ಪು ತಿಮ್ಮಯ


ಸಂಬಂಧಿತ ಟ್ಯಾಗ್ಗಳು

kodagu rain ಚಿತ್ರಣ ಪ್ರವಾಸೋದ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ