ಸಿಟ್ಟಿಗೆದ್ದ ಡಿಸಿಎಂ ಪರಮೇಶ್ವರ್!

DCM parameshwar suddenly visited to dasarahalli bbmp ward

31-08-2018

ಬೆಂಗಳೂರು: ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ಇಂದು ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಲ್ಲಿನ ಆಡಳಿತ ವೈಖರಿ, ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಅವರು ಗರಂ ಆದರು.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತ ವೈಖರಿ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಎಂಟು ವಲಯ ಮಾಡಿದ್ದು, ಪ್ರತಿ ವಲಯಕ್ಕೂ ಜಂಟಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಈ ವಲಯದ ಸಂಪೂರ್ಣ ಜವಾಬ್ದಾರಿ ಇವರ ಮೇಲಿದೆ. ಇಲ್ಲಿಯ ಯಾವುದೇ ಕಾಮಗಾರಿ ತಡವಾದರೆ, ಇತರೆ ಏನೇ ಕೆಲಸ ಪೂರ್ಣಗೊಳ್ಳದಿದ್ದರೆ ಆಯಾ ವಲಯದ ಜಂಟಿ ಆಯುಕ್ತರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಂದು ವೇಳೆ ಕಾನೂನಾತ್ಮಕ ತೊಡಕು ಇದ್ದರೆ ಅದನ್ನು ಆಯುಕ್ತರ ಗಮನಕ್ಕೆ ತರಬೇಕು. ಇಲ್ಲವೇ ಅದಕ್ಕೂ ನೀವೆ ಹೊಣೆಯಾಗುತ್ತೀರಿ ಎಂದು ನೇರವಾಗಿ ಹೇಳಿದರು.

ಕುಡಿಯುವ ನೀರು, ಒಳಚರಂಡಿ, ರಸ್ತೆ, ಕಸ ವಿಲೇವಾರಿ, ಸರಕಾರಿ ಯೋಜನೆ ಸಮರ್ಪಕವಾಗಿ ಜನರಿಗೆ ತಲುಪಿಸುವ ಹೊಣೆ ಇವರ ಮೇಲಿರುತ್ತದೆ. ಈ ವಲಯದಲ್ಲಿ ಆಡಳಿತ ವೈಖರಿ ಇನ್ನಷ್ಟು ಚುರುಕುಗೊಳ್ಳಬೇಕು. ಮೂರು ವರ್ಷದಿಂದ ಸಾಕಷ್ಟು ಕಾಮಗಾರಿ ಬಾಕಿ ಇದೆ. ಶೀಘ್ರವೇ ಮುಗಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಹುತೇಕ ಕಾಮಗಾರಿಗಳು ಅವಧಿ ಮುಗಿದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಯಾವುದೇ ಕಾಮಗಾರಿಯಾಗಲಿ ಅದಕ್ಕೆ ಅವಧಿ ನಿಗದಿ ಮಾಡಿ, ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿ. ಇಲ್ಲವೇ, ಅವರ ಟೆಂಡರ್ ರದ್ದುಪಡಿಸಿ ಎಂದು ತಾಕೀತು ಮಾಡಿದರು.

ಇನ್ನು ದಾಸರಹಳ್ಳಿ ವಲಯದಲ್ಲಿ ಬಯೋಮೆಟ್ರಿಕ್ ಅಳವಡಿಸಿರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಶೀಘ್ರವೇ ಅಳವಡಿಸುವಂತೆಯೂ ಸೂಚನೆ ನೀಡಿದರು. ಪ್ರತಿ ವಲಯದಲ್ಲೂ ಒಒಡಿ ಮೇಲೆ ಸಾಕಷ್ಟು ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟವರೂ ಇದ್ದಾರೆ. ಇವರನ್ನೆಲ್ಲಾ ಆದಷ್ಟು ಬೇಗ ಅವರ ಇಲಾಖೆಗೆ ವಾಪಾಸ್ ಕಳುಹಿಸಿ, ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಜಂಟಿ ಆಯುಕ್ತರಿಗೆ ಕ್ಲಾಸ್: ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ದಿಢೀರ್ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ವಲಯದ ಜಂಟಿ ಆಯುಕ್ತ ಕಚೇರಿಯಲ್ಲಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರು ಯಾವುದೋ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‍ಗೆ ತೆರಳಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಉತ್ತರ ನೀಡಿದರು. ಯಾವ ಪ್ರಕರಣ ಅವರಿಗೆ ಈಗಲೇ ಕರೆ ಮಾಡಿ ಎಂದು ಪರಮೇಶ್ವರ್ ಅವರು ತಾಕೀತು ಮಾಡಿದ ಬಳಿಕ ಕೆಲ ಸಮಯದಲ್ಲಿ ಜಂಟಿ ಆಯುಕ್ತರು ಕಚೇರಿಗೆ ಆಗಮಿಸಿದರು. ಇನ್ನೊಮ್ಮೆ ಈ ರೀತಿ ಮಾಡದಂತೆ ಅವರಿಗೆ ಎಚ್ಚರಿಕೆ ನೀಡಿದರು.

ಕಚೇರಿಯಲ್ಲಿ ಕೆಲ ಸಿಬ್ಬಂದಿ ಇರದೇ ಇದುದ್ದನ್ನೂ ಗಮನಿಸಿದ ಪರಮೇಶ್ವರ್ ಅವರು, ಆ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು. ಯಾವೆಲ್ಲಾ ಕಾಮಗಾರಿಗಳು ಚಾಲ್ತಿಯಲ್ಲಿವೆ, ಎಷ್ಟು ಅವಧಿಯಿಂದ ಬಾಕಿ ಇವೆ ಎಂಬ ಮಾಹಿತಿ ಪಡೆದರು. ಪ್ರತಿನಿತ್ಯ ಸಾರ್ವಜನಿಕರ ಅಹವಾಲು ಸ್ವೀಕರಿಸುವ ದಿನಚರಿ ಪರಿಶೀಲಿಸಿ, ಅಹವಾಲು ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡು, ಶೀಘ್ರವೇ ಸಾರ್ವಜನಿಕರಿಗೆ ಸ್ಪಂದಿಸುವಂತೆ ಸೂಚಿಸಿದರು. ಅಲ್ಲದೆ, ಸಿಬ್ಬಂದಿಯ ದಿನಚರಿಯನ್ನು ಪರಿಶೀಲಿಸಿದರು. ಕೆಲವರು ಬಹಳ ದಿನದಿಂದ ಸಹಿ ಹಾಕದೇ ಇರುವುದಕ್ಕೂ ಸಿಟ್ಟಿಗೆದ್ದರು.


ಸಂಬಂಧಿತ ಟ್ಯಾಗ್ಗಳು

G.Parameshwara BBMP ಕಾಮಗಾರಿ ತರಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ