‘ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದರೆ ತಪ್ಪೇನು’

If Siddaramaiah told

30-08-2018

ಬೆಂಗಳೂರು/ನವದೆಹಲಿ: ಕಾಂಗ್ರೆಸ್-ಜೆಡಿಎಸ್  ಮೈತ್ರಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿಯನ್ನು ಭೇಟಿ ಮಾಡಿ, ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಕಿರುಕುಳ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ದೆಹಲಿಯ ರಾಹುಲ್ ಗಾಂಧಿ ನಿವಾಸದಲ್ಲಿಂದು ಭೇಟಿ ಮಾಡಿದ ಕುಮಾರಸ್ವಾಮಿ, ಸರ್ಕಾರ ಮುನ್ನಡೆಸಲು ಅವಕಾಶ ನೀಡಿದ್ದಕ್ಕೆ ಹಾಗೂ ಮೈತ್ರಿ ಸರ್ಕಾರ ನಡೆಸಲು ಸಂಪೂರ್ಣ ಸಹಕಾರ  ನೀಡಿರುವುದು ಶ್ಲಾಘನೀಯ ಎಂದರು. ಮೈತ್ರಿ ಸರ್ಕಾರ ಯಾವುದೇ ತೊಂದರೆ ಇಲ್ಲದೆ ಮುನ್ನಡೆಯುತ್ತಿದೆ. ಆದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತವರ ಬೆಂಬಲಿಗರಿಂದ ಸಣ್ಣಪುಟ್ಟ ಕಿರಿಕಿರಿ ಇದೆ. ಇದನ್ನು ನಿವಾರಿಸಿಕೊಂಡು ಮುನ್ನಡೆಯಬೇಕಾಗಿದೆ.

ರಾಹುಲ್ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನ ಪೂರೈಸಿದೆ. ನಾಡಿನ ಜನತೆಗೆ ಕೃತಜ್ಞತೆಗಳು. ಹಲವಾರು ನಿರೀಕ್ಷೆಗಳನ್ನು ಈಡೆರಿಸುವ ಕಡೆ ಸರ್ಕಾರ ದಾಪುಗಾಲು ಹಿಡುತ್ತಿದೆ. ಅಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ರೈತ ಸಮುದಾಯ ಬಯಸಿದಂತೆ ಸಾಲಮನ್ನಾ ಮಾಡಿದ್ದೇವೆ. ಮೈತ್ರಿ ಸರ್ಕಾರ ಆದಾಯ ಸಂಗ್ರಹದಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲೇ ಸರ್ಕಾರ ನಡೆಯುತ್ತಿದೆ. ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದು ರಾಹುಲ್ ಗಾಂಧಿಯವರ ಬಳಿ ಚರ್ಚಿಸುವ ವಿಷಯವೂ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಈಗಾಗಲೇ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅವರು ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಕೆಲವರು ಹಿರಿಯರಾದ ಆರ್.ವಿ. ದೇಶಪಾಂಡೆ ಸಿಎಂ ಆಗಬೇಕು ಅಂತಾರೆ ಎಂದು ಆ ಮೂಲಕ ಕುಮಾರಸ್ವಾಮಿ ದೇಶಪಾಂಡೆಗೆ ಸಿಎಂ ಆಗುವ ಆಸೆ ಹುಟ್ಟಿಸಿದರು.

ಮೈತ್ರಿ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರು ಒಂದು ಟೀಂ ಆಗಿ ಕೆಲಸ ಮಾಡಿದ್ದೇವೆ. ನೂರು ದಿನ ಹನಿಮೂನ್ ಟೈಮ್ ಮುಗಿಸಿದ್ದೇವೆ. ಒಟ್ಟಾಗಿ ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಸಂಪುಟ ವಿಸ್ತರಣೆ ಮಾಡಲು ಮನವಿ : ರಾಹುಲ್ ಗಾಂಧಿ ಅವರ ಜೊತೆ ಯಾವುದೇ  ವಿಷಯ ಚರ್ಚೆ ಮಾಡಿಲ್ಲ. ಇದು ಕೇವಲ ಸೌಹಾರ್ದಯುತ ಭೇಟಿ ಅಷ್ಟೆ. ಆದರೆ, ಸಚಿವ ಸಂಪುಟ ವಿಸ್ತರಣೆ ಕುರಿತು ಕೂಡ ಚರ್ಚೆ ನಡೆಸಿದ್ದು, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು. ಈ ವೇಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಡ್ಯಾನಿಷ್ ಆಲಿ, ಬಂಡೆಪ್ಪ ಕಾಶೆಂಪೂರ ಮತ್ತಿತರರಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ