ಬಿಜೆಪಿ ಮುಖಂಡನನ್ನು ಕಲ್ಲಿನಿಂದ ಜಜ್ಜಿ ಕೊಲೆ !

Kannada News

01-06-2017 289

ಬೆಂಗಳೂರು:- ನಗರದ ಹೊರವಲಯದ ಚಂದಾಪುರದ ಬಳಿ ಬುಧವಾರ ರಾತ್ರಿ ಬೈಕ್‍ನಲ್ಲಿ ಹೋಗುತ್ತಿದ್ದ ಅನೇಕಲ್‍ನ ತಾಲ್ಲೂಕು ಬಿಜೆಪಿ ಎಸ್‍ಸಿ-ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಡ್ಯಾಗರ್‍ನಿಂದ ಇರಿದು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಬೊಮ್ಮಸಂದ್ರದಲ್ಲಿ ಕಳೆದ ಮಾರ್ಚ್ 14 ರಂದು ನಡೆದ ಬಿಜೆಪಿ ಮುಖಂಡ ವಾಸು ಕೊಲೆ ಮಾಸುವ ಮುನ್ನವೇ ಮತ್ತೋರ್ವ ಬಿಜೆಪಿ ಮುಖಂಡ ಹರೀಶ್ ಅವರ ಕೊಲೆ ನಡೆದಿರುವುದು ಆನೇಕಲ್ ಸುತ್ತಮತ್ತಲ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಹರೀಶ್ ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದು ಮಾಜಿ ಸಚಿವ ನಾರಾಯಣಸ್ವಾಮಿ ಅವರ ಬೆಂಬಲಿಗರಾಗಿದ್ದರು.  ರಾತ್ರಿ 10.30ರ ವೇಳೆ ಚಂದಾಪುರಕ್ಕೆ ಸಮೀಪದ ಹೀಲಲಿಗೆಯ ಗೇಟ್‍ನಲ್ಲಿ ಹರೀಶ್ (32) ಅವರ ಕೊಲೆ ನಡೆದಿದೆ. ತಮ್ಮನ ಮದುವೆ ಲಗ್ನ ಪತ್ರಿಕೆಗಳನ್ನು ಸ್ನೇಹಿತರಿಗೆ ಹಂಚಿ ರಾತ್ರಿ 11.30ರ ವೇಳೆ ಕರಿಷ್ಮಾ ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಹರೀಶ್ ಅವರನ್ನು ಚಂದಾಪುರದ ಹೀಲಲಿಗೆ ಗೇಟ್‍ನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬೈಕ್ ನಿಲ್ಲಿಸಿದ ತಕ್ಷಣವೇ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದು ಬೈಕ್‍ನಿಂದ ಇಳಿದು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಹರೀಶ್‍ನನ್ನು ಹಿಡಿದು  ಕಲ್ಲುಗಳಿಂದ ಹೊಡೆದಿದ್ದಾರೆ ತಪ್ಪಿಸಿಕೊಳ್ಳಲು ಯತ್ನಿಸಿ ಮುಳ್ಳಿನ ತಂತಿಯ ಮೇಲೆ ಬಿದ್ದರೂ ಡ್ಯಾಗರ್ ನಿಂದ ಮನಸೋಯಿಚ್ಛೆ ಇರಿದು, ಪಕ್ಕದಲ್ಲೆ ಇದ್ದ ಕಾಂಕ್ರೀಟ್ ಬ್ಲಾಕ್‍ಗಳನ್ನು ತಲೆ ಮೇಲೆ ಎತ್ತಿಹಾಕಿ ಹರೀಶ್‍ರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಹರೀಶ್ ಕೊಲೆ ನಡೆದಿದೆ ಎಂದು ಆರೋಪಿಸಲಾಗಿರುವುದನ್ನು ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ತಳ್ಳಿಹಾಕಿದ್ದಾರೆ. ಹೀಲಲಿಗೆಯ ಬಳಿಯ ಕೆರೆಯಲ್ಲಿ ಮೀನು ಹಿಡಿಯುವ ವಿಚಾರಕ್ಕೆ ಹರೀಶ್ ಹಾಗೂ ಸಂಬಂಧಿಕರ ನಡುವೆ ಜಗಳ ಉಂಟಾಗಿತ್ತು ಗ್ರಾಮಸ್ಥರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು ಈ ದ್ವೇಷದಿಂದ ಕುದಿಯುತ್ತಿದ್ದ ಐದಾರು ಮಂದಿ ಕೊಲೆ ನಡೆಸಿದ್ದಾರೆ ಹರೀಶ್ ಕುಟುಂಬವದರು ರಾಜೇಶ್ ಸೇರಿ ಐವರ ವಿರುದ್ದ ದೂರು ನೀಡಿದ್ದಾರೆ. ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ ಕಳೆದ ಮಾರ್ಚ್ 14 ರಂದು ಬೊಮ್ಮಸಂದ್ರ ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್(ವಾಸು) ಹತ್ಯೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ ಹರೀಶ್ ಕೊಲೆಯಾಗಿದೆ. ಕಳೆದ ಒಂದುವರೆ ವರ್ಷದಲ್ಲಿ ಆನೇಕಲ್ ತಾಲೂಕಿನ ಮೂವರು ಬಿಜೆಪಿ ಮುಖಂಡರು ಕೊಲೆಯಾಗಿದ್ದಾರೆ. ಕೊಲೆಯಾದ ಹರೀಶ್ ಚಂದಾಪುರ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಬಾಮೈದ ಎಂದು ಗೊತ್ತಾಗಿದೆ.  ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹೀಲಲಿಗೆಯ ರಾಜೇಶ ಮತ್ತು ಸಂತೋಷ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರೊಚ್ಚಿಗೆದ್ದ ಸ್ನೇಹಿತರು ಬೆಂಬಲಿಗರು ಹಾಗೂ ಸಂಬಂಧಿಕರು ರಾಜೇಶ ಮತ್ತು ಸಂತೋಷ್ ಮನೆಗಳ ಮೇಲೆ ದಾಳಿ ನಡೆಸಿ ಮನೆಯ ಕಿಟಕಿ ಗಾಜು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಬಿಗಿಭದ್ರತೆ ವಹಿಸಲಾಗಿದೆ. ಹತ್ಯೆಯಾದ ಬಿಜೆಪಿ ಮುಖಂಡ ಹರೀಶ್ ಮೃತದೇಹವನ್ನು ಸ್ಪರ್ಶ್ ಆಸ್ಪತ್ರೆಗೆ ರವಾನಿಸಲಾಗಿದ್ದು ಸೂರ್ಯ ಸಿಟಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ