ಬಾಲಕನೊಬ್ಬನ ಮೇಲೆ 10ಕ್ಕೂ ಹೆಚ್ಚು ನಾಯಿಗಳ ದಾಳಿ

10 dogs attacked on a 4 years boy

30-08-2018

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಹೆಚ್‍ಎಎಲ್‍ನ ವಿಭೂತಿಪುರಂ ಬಳಿ ನಾಲ್ಕು ವರ್ಷದ ಬಾಲಕನನ್ನು 10ಕ್ಕೂ ಹೆಚ್ಚು ನಾಯಿಗಳು ಕಚ್ಚಿ ಗಾಯಗೊಳಿಸಿವೆ.

ಶೌಚಾಲಯಕ್ಕೆ ಹೋಗಿದ್ದ 4 ವರ್ಷದ ಬಾಲಕನ ಮೇಲೆ 10ಕ್ಕೂ ಹೆಚ್ಚು ನಾಯಿಗಳು ಕಚ್ಚಿ  ಗಾಯಗೊಳಿಸಿದ್ದು, ಆಟ-ಪಾಠ ಕಲಿಯಬೇಕಿದ್ದ ಬಾಲಕನೀಗ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ವಿಭೂತಿಪುರಂ ಬಳಿ ಬಾಲಕ ನಿನ್ನೆ ಸಂಜೆ ಬಾಲಕ ಶೌಚಾಲಯಕ್ಕೆ ತೆರಳಿದ್ದಾಗ, ಏಕಾಏಕಿ 10ಕ್ಕೂ ಹೆಚ್ಚು ಬೀದಿನಾಯಿಗಳ ಗುಂಪು ಬಾಲಕನ ಮೇಲೆ ಎರಗಿ, ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗನಿಗೆ ನಾಯಿಗಳು ಕಚ್ಚಿ ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ನೋಡಿ ತಾಯಿ ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಮಗನ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಇವುಗಳಿಗೆ ಮೂಲ ಕಾರಣ ವಿಭೂತಿಪುರಂನಲ್ಲಿರುವ ಹೆಚ್ಚಿನ ಮಾಂಸದ ಅಂಗಡಿಗಳು. ಅಂಗಡಿಯವರು ನಾಯಿಗಳಿಗೆ ಮಾಂಸದ ತುಂಡುಗಳನ್ನು ಹಾಕುತ್ತಾರೆ. ಹೀಗಾಗಿ ಇವನ್ನೇ ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುತ್ತಲೇ ಇರುತ್ತವೆ. ಈ ಬಗ್ಗೆ  ಬಿಬಿಎಂಪಿ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ.

ಈ ನಡುವೆ ಬಾಲಕನಿಗೆ ನಾಯಿಗಳು ಕಚ್ಚಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಭೇಟಿ ನೀಡಿದ ಬಿಬಿಎಂಪಿ ಮೇಯರ್ ಸಂಪತ್‍ ರಾಜ್ ಅವರು ಬಾಲಕನ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dogs Child ಬಿಬಿಎಂಪಿ ಚಿಕಿತ್ಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ