ಚಳವಳಿಗಾರರ ಬಂಧನ ತುರ್ತು ಪರಿಸ್ಥಿತಿಗೆ ಸಾಕ್ಷಿ: ಯಶವಂತ ಸಿನ್ಹಾ

Again Yashwant Sinha

29-08-2018

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಭೀತಿಯ ವಾತಾವರಣ ಆವರಿಸಿದ್ದು, ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಇಂದಿಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಸ್ಥರನ್ನು ವಿರೋಧಿಸುವವರ ದ್ವನಿಯನ್ನು ದಮನ ಮಾಡುವ ಪ್ರವೃತ್ತಿ ಎಲ್ಲೆಡೆ ತಾಂಡವವಾಡುತ್ತಿದೆ. ಇಡೀ ದೇಶವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸುತ್ತಿದ್ದಾರೆ. ಉಳಿದೆಲ್ಲಾ ನಾಯಕರು ಲೆಕ್ಕಕ್ಕಿಲ್ಲದಂತಾಗಿದ್ದಾರೆ ಎಂದರು.

ಹೈದರಾಬಾದ್‍ನಲ್ಲಿ ಕ್ರಾಂತಿಕಾರಿ ಕವಿ ವರವರರಾವ್ ಸೇರಿದಂತೆ ಐದು ಮಂದಿ ಚಳವಳಿಗಾರರನ್ನು ಬಂಧಿಸಿರುವುದು ದೇಶದಲ್ಲಿ ತುರ್ತು ಸ್ಥಿತಿ ವಾತಾವರಣ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರನ್ನು ಸೊಲ್ಲೆತ್ತದಂತೆ ಮಾಡುವ ವ್ಯವಸ್ಥಿತ ಷಡ್ಯಂತ್ರಗಳು ನಡೆದಿವೆ ಎಂದು ಆರೋಪಿಸಿದರು.

ರಫೇಲ್‍ ಯುದ್ಧ ವಿಮಾನ ಖರೀದಿ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ ಯಶವಂತ ಸಿನ್ಹಾ, ರಫೇಲ್ ಒಪ್ಪಂದ ಕುರಿತಂತೆ ಪ್ರಧಾನಿ ಅವರನ್ನು ಪ್ರಶ್ನಿಸಿ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ಹೆಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದ ಯಾಕೆ ರದ್ದು ಮಾಡಿದ್ದೀರಿ, ಸಚಿವ ಸಂಪುಟದ ಗಮನಕ್ಕೂ ತಾರದೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿತ್ತೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಜವಾಬ್ದಾರಿಯಾಗುತ್ತಾರೆ ಎಂದರು.

ಇದರ ಒಟ್ಟು ಖರ್ಚು ಎಷ್ಟು ಎನ್ನುವುದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದೇನೆ. ಮೇಕ್ ಇನ್ ಇಂಡಿಯ ಎಂದು ಹೇಳುವವರೇ ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಸರಿಯೇ?. ಆದರೆ ಇದರಿಂದಾಗಿ ಹೆಚ್‍ಎಎಲ್‍ಗೆ ತುಂಬ ನಷ್ಟವಾಗಿದೆ. ಒಪ್ಪಂದ ಮಾಡಿಕೊಂಡಿರುವ ಕಂಪನಿಯ ವಿರುದ್ಧ ನಾನು ಮಾತನಾಡುವುದಿಲ್ಲ. ಏಕೆಂದರೆ 500 ಕೋಟಿ ರೂ. ಮಾನಹಾನಿ ಪ್ರಕರಣವನ್ನು ದಾಖಲು ಮಾಡಿ ಹೆದರಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪನಿಗೆ ಆಹ್ವಾನ ಕೊಟ್ಟಿದ್ದು ಏಕೆ, 20 ದಿನಗಳ ಹಿಂದಷ್ಟೆ ನೋಂದಣಿಯಾಗಿ ಅನುಭವವೇ ಇಲ್ಲದ ಕಂಪನಿಯೊಂದಿಗೆ ಹೇಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ವಿಚಾರದಲ್ಲಿ ಏನನ್ನೂ ಮುಚ್ಚಿಡುವ ಪ್ರಮೇಯವೇ ಇಲ್ಲ ಜಂಟಿ ಸಂಸದೀಯ ಸಮಿತಿಯಲ್ಲಿ ರಫೇಲ್ ಯುದ್ಧ ವಿಮಾನದ ಬಗ್ಗೆ ಚರ್ಚೆಯಾಗಬೇಕು ಎಂದರು. ಎನ್.ಡಿ.ಎ ಆಡಳಿತದಲ್ಲಿ ಪ್ರಜಾತಂತ್ರ ವ್ಯವಸ್ಥೆಗಳೂ ಸಹ ಹೊಂದಾಣಿಕೆ ಮಾಡಿಕೊಂಡಿವೆ. ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಸೇರಿದಂತೆ ಎಲ್ಲರಂಗಗಳೂ ಹೊಂದಾಣಿಕೆ ಮನೋಭಾವದಲ್ಲಿರುವುದು ದೇಶದ ಇಂದಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಒಳಪಟ್ಟಿವೆ. ತನಿಖಾ ಸಂಸ್ಥೆಗಳನ್ನು ಅವರ ಇಚ್ಛೆಗ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ತಮ್ಮ ವಿರುದ್ಧ ಮಾತನಾಡುವವರನ್ನು ದಮನ ಮಾಡಲು ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಇಲಾಖೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಸರ್ಕಾರ ಎಲ್ಲೆಡೆ ತನ್ನ ತನಿಖಾ ಸಂಸ್ಥೆಗಳ ಮೂಲಕ ತಮ್ಮ ವಿರುದ್ಧ ಧ್ವನಿಯೆತ್ತುವರನ್ನು ದಮನ ಮಾಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಕೃಪಾ ಪೋಷಣೆಯಲ್ಲಿರುವ ಕೆಲ ಸಂಸ್ಥೆಗಳ ಮೂಲಕ ಮಾನನಷ್ಟ ಮೊಕದ್ದಮೆ ಹಾಕುವ ಮೂಲಕವೂ ವಿರೋಧದ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆದಿವೆ. ದೇಶದ ಜನತೆಯೇ ಈ ದಮನಕಾರಿ ಶಕ್ತಿಗಳಿಗೆ ಬುದ್ಧಿ ಕಲಿಸುತ್ತಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

yashwant sinha Narendra modi ಮಾನನಷ್ಟ ನಿಯಂತ್ರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ