ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದ ಕೈ-ಜೆಡಿಎಸ್ ನಾಯಕರು

The coalition government leaders said the alliance government is secure

29-08-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೂರು ದಿನಗಳು ತುಂಬುತ್ತಿರುವಂತೆಯೇ ಸರ್ಕಾರಕ್ಕೆ ಅಪಾಯವಿಲ್ಲ ಎಂದು ಮೈತ್ರಿ ಸರ್ಕಾರದ ನಾಯಕರು ಹೇಳಿಕೊಂಡಿದ್ದಾರೆ.

ರಾಮನಗರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಹುಬ್ಬಳ್ಳಿಯಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಶತಕ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಮನ್ವಯ ಸಮಿತಿ ಸಭೆಗೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಜನ ಬಯಸಿದರೆ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದೇನೆ. ಈಗಲೂ ಅದನ್ನೇ ಪುನರುಚ್ಚರಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರ ಏನೇ ನಿರ್ಧಾರ ಕೈಗೊಂಡರೂ, ಅದರ ಲಾಭ ಎರಡೂ ಪಕ್ಷಗಳಿಗೆ ದೊರೆಯಲಿದೆ ಎಂದು ಹೇಳಿದರು. ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ತಾವು ನೀಡಿದ್ದ ಹೇಳಿಕೆಗೆ ಹಲವು ಸಚಿವರು, ಶಾಸಕರು ಬೆಂಬಲ ಸೂಚಿಸಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಈಗಲೂ ಹೇಳುತ್ತಿದ್ದೇನೆ ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಎಂದರು.

ರಾಮನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ನೂತನವಾಗಿ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಚಿಂತನೆ ನಡೆಸಲಾಗಿದೆ. ಆ ಎಲ್ಲಾ ಯೋಜನೆಗಳೂ ಸೆಪ್ಟೆಂಬರ್ ನಿಂದಲೇ ಜಾರಿಗೆ ಬರಲಿವೆ ಎಂದರು.

ನಮ್ಮದೇ ಆದ ಯೋಜನೆಗಳು ಸಾಕಷ್ಟಿವೆ. ಸಮಯ ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧ ಎಂದರು. ಇದೇ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಮ್ಮಿ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅದೇ ಗುಂಗಿನಲ್ಲಿಯೇ ಇರಲಿ. ನಾವು ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪರಮೇಶ್ವರ್, ಮೈತ್ರಿ ಸರ್ಕಾರ ಸುಭದ್ರವಾಗಿದೆ. ಈ ಕುರಿತು ಆತಂಕಪಡುವ ಅಗತ್ಯವಿಲ್ಲ. ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗಿಲ್ಲ ಎಂದರು.

ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಬಿಜೆಪಿ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಎಷ್ಟು ಜನ ಎನ್ನುವ ಮಾಹಿತಿಯನ್ನು ಈಗ ಬಹಿರಂಗಪಡಿಸುವುದಿಲ್ಲ. ಕಾಲ ಬಂದಾಗ ಎಲ್ಲವನ್ನೂ ವಿವರವಾಗಿ ಹೇಳುವುದಾಗಿ ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಮ್ಮಿಶ್ರ ಸರ್ಕಾರ ಇಂಥಹ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು 100 ದಿನಗಳನ್ನೇ ಪೂರೈಸಿದ್ದೀವಿ. ಈ ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.

ಈ ನೂರು ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ಕಳೆದ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ. ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಅಳವಡಿಸಿದ್ದೇವೆ. ಈ ಸರಕಾರದ ಪ್ರಮುಖ ಕಾರ್ಯಕ್ರಮವಾದ ರೈತರ 31 ಸಾವಿರ ಕೋಟಿ ರೂ ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ರೈತರು ಕೈಸಾಲ ತೀರಿಸಲು ಹೈರಾಣಾಗಿದ್ದಾರೆ. ಅದಕ್ಕಾಗಿಯೇ ಕೈಸಾಲ ಮನ್ನಾ ಮಾಡಲು ಹೊರಟಿದದ್ದೇವೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಯುರೋಪ್ ಪ್ರವಾಸ ಕೈಗೊಳ್ಳುತ್ತಿರುವುದು ಅವರ ವೈಯಕ್ತಿಕ ವಿಚಾರ. ತಮ್ಮ ಆಪ್ತರನ್ನು ಸಹ ಅವರು ಕರೆದುಕೊಂಡು ಹೋಗುತ್ತಿದ್ದಾರೆ. ಈ ಕುರಿತು ತಾವು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah Parameshwara ಕೈ ಸಾಲ ಅನುಷ್ಠಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ