ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಹೊಣೆಯಲ್ಲ: ಬಿಎಸ್ವೈ

yeddyurappa talked about state coalition government

29-08-2018

ಬೆಂಗಳೂರು: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ. ಆದರೆ, ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ‌ ಸಚಿವ ಬಾಬುರಾವ್ ಚಿಂಚನಸೂರ್ ಹಾಗು ಪತ್ನಿ ಅಮರೇಶ್ವರಿಬಾಬು ಚಿಂಚನಸೂರ್ ಇಂದು ಬಿಜೆಪಿ ಪಕ್ಷ ಸೇರಿದ ನಂತರ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರಿಗೂ ಅನ್ನಿಸುತ್ತಿಲ್ಲ, ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, 13 ಜಿಲ್ಲೆಗಳಲ್ಲಿ ಭೀಕರ ಬರ ಎದುರಾಗಿದೆ, ಉಳಿದ‌ ಕಡೆ ಅತಿವೃಷ್ಟಿ ಸಂಕಷ್ಟ ಎದುರಾಗಿದೆ. ಆದರೆ. ವಿಧಾನಸೌಧದಲ್ಲಿ ಸಂಪುಟ ಸದಸ್ಯರು ಸಿಗದ ಪರಿಸ್ಥಿತಿ ಇದೆ, ರಾಜ್ಯದಲ್ಲಿ ಓಡಾಡಿ ಸಮಸ್ಯೆ ಆಲಿಸುತ್ತಿಲ್ಲ, ವಿಧಾನಸೌಧದಲ್ಲೂ ಸಿಗುತ್ತಿಲ್ಲ ಎಂದು ವಾಗ್ದಳಿ ನಡೆಸಿದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಸಿಎಂ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ, ಗೊಂದಲ ಸೃಷ್ಟಿಯ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಗೊಂದಲದ ನಡುವೆ ಯಾವುದೇ ಹೇಳಿಕೆ‌ ಕೊಡಬಾರದು ಎಂದು ನಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದೇನೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ‌. ಅವರಾಗಿಯೇ ಕುಸಿದು ಬಿದ್ದರೆ ಅದಕ್ಕೆ ನಾವು ಜವಾಬ್ದಾರಿ ಅಲ್ಲ ಎಂದರು.

ಮಡಿಕೇರಿ ತಾಲ್ಲೂಕು ಅತಿವೃಷ್ಟಿಯಿಂದ ಕಷ್ಟದಲ್ಲಿದೆ, ದೊಡ್ಡ ಪ್ರಮಾಣದ ನೆರವು ಮಠಾಧೀಶರು, ಜನರು ನೀಡಿದ್ದಾರೆ. ನಮ್ಮ ಶಾಸಕರು, ಸಂಸದರು ಒಂದು ತಿಂಗಳ ವೇತನವನ್ನು ಸಿಎಂ ನಿಧಿಗೆ ನೀಡಿದ್ದಾರೆ. ಗಾಳಿಬೀಡು ಪಂಚಾಯತ್ ನ ಮಂಡಗೇರಿ‌ ಗ್ರಾಮ‌ ಸಂಪೂರ್ಣ ನಾಶವಾಗಿ 250 ಕುಟುಂಬಗಳು ಬೀದಿಗೆ ಬಂದಿವೆ. ಹೆಬ್ಬೆಟ್ಟಗೆರೆ, ಉದಯಗಿರಿ, ಜೋಲಕುಪಾಲು ಗ್ರಾಮದ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಮಧ್ಯಮವರ್ಗದ ಜನರೇ ಇರುವ ಮುಕ್ಕೋಟು, ಕಾಲೋರು, ಮೂಬತ್ತು ಒಕ್ಕಲು, ಕರವಾಲೆ ಸಂಪೂರ್ಣ ನಾಶವಾಗಿದೆ, ಹತ್ತು ಲಕ್ಷದಿಂದ 50 ಲಕ್ಷದವರೆಗರ ಖರ್ಚು ಮಾಡಿ ಕಟ್ಟಿದ್ದ ಮನೆಗಳ ಗುರುತೇ ಸಿಗುತ್ತಿಲ್ಲ. ರಾಮಚಂದ್ರಾಪುರ ಮಠ ಹಾಗು ಸರ್ಕಾರ ತಲಾ ಒಂದು ಗೋಶಾಲೆ ತೆರೆದಿದೆ ಇನ್ನೂ ಅಗತ್ಯವಿದೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ಕೋಟಿ ಸರ್ಕಾರದಿಂದ 7 ಕೋಟಿ ರೂ.ಗಳನ್ನು ಸೈನಿಕರ ಕಲ್ಯಾಣ ನಿಧಿಯಿಂದ ಘೋಷಿಸಿದ್ದಾರೆ. ನಾವು ಕೂಡ ಹೆಚ್ಚಿನ ಪರಿಹಾರಕ್ಕಾಗಿ ಪ್ರಧಾನಿಗೆ ಮನವಿ ಮಾಡಿದ್ದೇವೆ. ಮೂರ್ನಾಲ್ಕು ದಿನದಲ್ಲಿ‌ ಅನುದಾನ ಬಿಡುಗಡೆ ಸಾಧ್ಯತೆ ಇದೆ ಎಂದರು.

ನೆರೆ ಪೀಡಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಎಸ್ಟಿಮೇಟ್, ಪ್ಲಾನ್ ಅನ್ನದೇ ತ್ವರಿತವಾಗಿ ಅಭಿವೃದ್ಧಿ ಕಾರ್ಯ ನಡೆಸಬೇಕು, ಬಟ್ಟೆ-ಬರೆ ಇತರೆ ಸಾಮಗ್ರಿಗಳು ಸಾಕು, ಅಲ್ಲಿ ಈಗ ಹಣ ಬೇಕಿದೆ ಹಾಗಾಗಿ ಕೈಲಾದ ಆರ್ಥಿಕ ನೆರವನ್ನು ನೀಡಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ನ ಪ್ರಭಾವಿ ಮುಖಂಡರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅವರೆಲ್ಲಾ ಒಬ್ಬೊಬ್ಬರಾಗಿಯೇ ಬಿಜೆಪಿಗೆ ಬರಲಿದ್ದಾರೆ ಎಂದು ಯಡಿಯೂರಪ್ಪ ಮತ್ತಷ್ಟು ಕೈ ನಾಯಕರು ಕಮಲ‌ಮುಡಿಯುವ ಸುಳಿವು ನೀಡಿದರು.

ನನ್ನ ಫೋನ್ ಸೇರಿದಂತೆ ಬಹಳಷ್ಟು ಜನರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಹಿಂದೆಯೇ ಇದರ ಬಗ್ಗೆ ಪ್ರಸ್ತಾಪಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ಇದನ್ನು ನಿಲ್ಲಿಸಬೇಕು ಫೋನ್ ಕದ್ದಾಲಿಕೆ ಸಂಬಂಧ ತನಿಖೆ ನಡೆಸಬೇಕು, ಇಲ್ಲದೇ ಇದ್ದಲ್ಲಿ ಹಿಂದೆ ಆದ ಘಟನೆ ಮರುಕಳಿಸಲಿದೆ ಎಂದು ರಾಮಕೃಷ್ಣ ಹೆಗಡೆ ಸರ್ಕಾರ ಪತನಗೊಂಡ ಪರಿಸ್ಥಿತಿ ಕುಮಾರಸ್ವಾಮಿ ಸರ್ಕಾರಕ್ಕೆ ಬರಲಿದೆ ಎನ್ನುವ ಎಚ್ಚರಿಕೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

B.S.Yeddyurappa congress-Jds ಪತನ ಕಮಲ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ